Index   ವಚನ - 191    Search  
 
ಅಂತಪ್ಪ ಭವಭಾರಿಗಳಾದ ಜೀವಾತ್ಮರು ಒಂದುಗೂಡಿ ದಾಸೋಹಮಾಡಿ, ಅಗ್ನಿಜ್ವಾಲೆಯಲ್ಲಿ ಅರತು ಹೋಗುವ ನೀರಿಗೆ ಪಾದೋದಕವೆಂದು ಹೆಸರಿಟ್ಟು, ಪೃಥ್ವಿಯಲ್ಲಿ ಬೆಳೆದ ಹದಿನೆಂಟು ಜೀನಸಿನ ಧಾನ್ಯವ ತಂದು, ಅಗ್ನಿ ನೀರಿನಿಂದ ಅಟ್ಟು ಪಾಕ ಮಾಡಿದ ಅನ್ನಕ್ಕೆ ಪ್ರಸಾದವೆಂದು ಹೆಸರಿಟ್ಟು, ಅಯ್ಯಾ ಹಸಾದ ಮಹಾಪ್ರಸಾದ ಪಾಲಿಸೆಂದು ಎಲ್ಲರೂ ಕ್ಯೆಯ್ಯೊಡ್ಡೊಡ್ಡಿ ಕೈಕೊಂಡು, ತಮ್ಮ ಕೈಯಲ್ಲಿರ್ದ ಇಷ್ಟಲಿಂಗಕ್ಕೆ ತೋರಿ ತೋರಿ ಲಿಂಗಕ್ಕೆ ಕೊಟ್ಟೆವೆಂದು ತಮ್ಮ ಉದರಾಗ್ನಿ ಹಸಿವು ತೃಷೆಯನಡಗಿಸಿಕೊಂಡು, ಮುಂಜಾವಿನಲ್ಲೆದ್ದು ಮಲಮೂತ್ರ ವಿಸರ್ಜಿಸುವ ಮೂಳಹೊಲೆಮಾದಿಗರಿಗೆಲ್ಲಿಹುದಯ್ಯಾ ಆ ಗುರುಲಿಂಗಜಂಗಮದ ತೀರ್ಥಪ್ರಸಾದಸಂಬಂಧ ? ಇಂತಪ್ಪ ಮತಿಭ್ರಷ್ಟ ಮರುಳಮಾನವರ ಭಿನ್ನಕ್ರಿಯಾಚಾರವನು ಸುಜ್ಞಾನಿ ಶರಣ ಕಂಡು ಹೊಟ್ಟಿ ಹುಣ್ಣಾಗುವನ್ನಬರ ನಕ್ಕು ಶಬ್ದಮುಗ್ಧನಾಗಿ ಸುಮ್ಮನಿದ್ದನು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.