Index   ವಚನ - 192    Search  
 
ಪಾದೋದಕ ಪಾದೋದಕವೆಂದು ಕೊಂಬಿರಿ, ಎಲ್ಲರಿಗೆ ಎಲ್ಲಿಹುದೋ ಪಾದೋದಕ ? ಈ ಪಾದೋದಕದ ಭೇದವ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಪಾದೋದಕವೆಂಬುದು ಪಾತಾಳಾದಿ ಪರಲೋಕಾಂತ್ಯಮಾದ ಅಖಿಳಕೋಟಿ ಬ್ರಹ್ಮಾಂಡಗಳ ಗರ್ಭೀಕರಿಸಿಕೊಂಡಿರ್ದ ಪರಿಪೂರ್ಣತ್ವವೇ ಪಾದೋದಕ. ಪಾದೋದಕವೆಂಬುದು ಶರಣನ ಸರ್ವಾಂಗವನೊಳಕೊಂಡು ಥಳಥಳಿಸಿ ಹೊಳೆಯುವ ಚಿದ್ರಸವೇ ಪಾದೋದಕ. ಇಂತಪ್ಪ ಪಾದೋದಕದ ಭೇದ ಬಲ್ಲವರು ನಿಜಗುಣಸ್ವಾಮಿಗಳು ಅಜಗಣ್ಣ ತಂದೆಗಳು ನಿಜಮಂಚಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಮಥಗಣಂಗಳು ಬಲ್ಲರಲ್ಲದೆ, ಸತ್ತುಹೋಗುವ ಹೇಸಿಮೂಳ ಕತ್ತಿಗಳೆತ್ತ ಬಲ್ಲರಯ್ಯಾ ? ಇಂತಪ್ಪ ಪರಾಪರ ನಾಮವನುಳ್ಳ ಪರಂಜ್ಯೋತಿಸ್ವರೂಪವಾದ ಪರತತ್ವ ಪಾದೋದಕವನರಿದು ಕೊಡಬಲ್ಲರೆ ಗುರುಲಿಂಗಜಂಗಮವೆಂದೆನ್ನಬಹುದು. ಇಂತೀ ವಿಚಾರವ ತಿಳಿದುಕೊಳ್ಳಬಲ್ಲರೆ ಸತ್ಯಸದ್ಭಕ್ತರೆಂದೆನ್ನಬಹುದು. ಇಂತಪ್ಪ ಭೇದವನರಿಯದೆ ಮತಿಭ್ರಷ್ಟ ಮರುಳಮಾನವರು ಆಣವಾದಿ ಕಾಮಿಕಾಂತ್ಯಮಾದ ಮಲತ್ರಯದ ಬಲೆಯಲ್ಲಿ ಶಿಲ್ಕಿ, ದೇಹಾದಿ ಮನಾಂತ್ಯಮಾದ ಅರುವತ್ತಾರುಕೋಟಿ ಕರಣಾದಿ ಗುಣಂಗಳು ಮೊದಲಾದ ಸಕಲಸಂಸಾರವಿಷಯಲಂಪಟದಲ್ಲಿ ಮಗ್ನರಾಗಿ, ಮಂದಮತಿ ಅಧಮ ಜಂಗಮದ ಕಾಲ ತ್ರಿಕಾಲದಲ್ಲಿ ಜಲದಿಂದ ತೊಳೆದು ಪಾದೋದಕವೆಂದು ಬಟ್ಟಲ ಬಟ್ಟಲ ತುಂಬಿ ನೀರ ಕುಡಿದು ತಮ್ಮ ದೇಹದ ಪ್ರಾಣಾಗ್ನಿಯ ತೃಷೆಯನಡಗಿಸಿಕೊಂಡು ಗಳಿಗೆ ತಾಸಿನ ಮೇಲೆ ಮೂತ್ರವಿಸರ್ಜಿಸಿ ಮಡಿಮೈಲಿಗೆಯೆಂದು ನುಡಿಯುವ ಮಲದೇಹಿಗಳ ಮೂಗ ತುಟಿತನಕ ಕೊಯ್ದು ಇಟ್ಟಂಗಿಯಲೊರಸಿ ಕಟಬಾಯಿ ಸೀಳಿ ಕನ್ನಡಿಯತೋರಿ ಮೇಲಮುಂದಾಗಿ ಅಟ್ಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ ನಿರ್ಮಾಯಪ್ರಭುವೆ.