Index   ವಚನ - 193    Search  
 
ಪ್ರಸಾದ ಪ್ರಸಾದವೆಂದು ನುಡಿದುಕೊಂಡುಂಬಿರಿ. ಎಲ್ಲರಿಗೆಲ್ಲಿಹುದೊ ಶಿವಪ್ರಸಾದ ? ಇಂತಪ್ಪ ಪ್ರಸಾದದ ಘನವಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರೋ. ಪ್ರಸಾದವೆಂಬುದು, ಪರಾಪರನಾಮವುಳ್ಳ ಪರಮಾನಂದವೇ ಪ್ರಸಾದ ಕಾಣಿರೋ. ಪ್ರಸಾದವೆಂಬುದು, ಪರಮನಿರಂಜನ ಪರಬ್ರಹ್ಮವೇ ಪ್ರಸಾದ ಕಾಣಿರೋ. ಪ್ರಸಾದವೆಂಬುದು, ಅಖಿಳಕೋಟಿ ಬ್ರಹ್ಮಾಂಡಗಳ ಗಮಿಸುವುದಕ್ಕೆ ಲಯಿಸುವುದಕ್ಕೆ ಮಾತೃಸ್ಥಾನವಾದ ಚಿತ್ಪ್ರಕಾಶವೇ ಪ್ರಸಾದ ಕಾಣಿರೋ. ಪ್ರಸಾದವೆಂಬುದು, ಪರಶಿವತತ್ವ ಪರಿಪೂರ್ಣತ್ವ ಪರಂಜ್ಯೋತಿ ಪರಮಪ್ರಕಾಶವೇ ಪ್ರಸಾದ ಕಾಣಿರೋ. ಇಂತಪ್ಪ ವಿಚಾರವ ತಿಳಿದು ಪ್ರಸಾದವ ಕೊಡಬಲ್ಲರೆ ಗುರುಲಿಂಗಜಂಗಮರೆಂದೆನ್ನಬಹುದು. ಇಂತಪ್ಪ ನಿರ್ಣಯವ ತಿಳಿದು ಪ್ರಸಾದವ ಕೊಳಬಲ್ಲಡೆ ಪ್ರಸಾದಿಗಳೆನ್ನಬಹುದು; ಪ್ರಳಯವಿರಹಿತರೆಂದೆನ್ನಬಹುದು. ಸತ್‍ಸದ್ಭಕ್ತರೆಂದೆನ್ನಬಹುದು. ಇಂತೀ ಭೇದವ ತಿಳಿಯದೆ ನೀರು ಕೂಳಿಗೆ ಪಾದೋದಕ ಪ್ರಸಾದವೆಂದು ಒಡಲಹೊರವುದು ಪ್ರಸಾದವಲ್ಲ. ಅಂತಪ್ಪ ಘನಮಹಾಪ್ರಸಾದದ ಸಕೀಲಸಂಬಂಧವನರಿದು ನಿರ್ಧರಿಸಿದವರಾರೆಂದರೆ, ಹಿಂದಕ್ಕೆ ಬಸವಾದಿ ಪ್ರಭುದೇವರಾಂತ್ಯಮಾದ ಏಳುನೂರಾ ಎಪ್ಪತ್ತು ಪ್ರಮಥಗಣಂಗಳು ಕೊಂಡುದು ಇದೇ ಪ್ರಸಾದ. ಇನ್ನು ಮುಂದಿನವರಿಗಾದಡು ಇದೇ ಪ್ರಸಾದ. ಇಂತಪ್ಪ ಪರತತ್ವಪ್ರಸಾದಕ್ಕೆ ಸುಜ್ಞಾನಿಗಳಾಗಿ ಸತ್ಕ್ರಿಯಾ ಸಮ್ಯಜ್ಞಾನವೆಂಬ ಎರಡುಕಾಲಿಗೆ ಷಡ್ವಿಧಭಕ್ತಿ ಎಂಬ ಹಲ್ಲು ಜೋಡಿಸಿ, ಏಣಿಯ ಹಚ್ಚಿ, ನಿರ್ವಯಲಪದವನೈದಲರಿಯದೆ, ಅಹಂಕಾರ ಮಮಕಾರವೆಂಬ ಎರಡುಕಾಲಿಗೆ ಅಷ್ಟಮದವೆಂಬ ಹಲ್ಲುಜೋಡಿಸಿ ಸಪ್ತವ್ಯಸನಗಳೆಂಬ ಕೀಲುಜಡಿದು ಷಡ್ವರ್ಗಗಳೆಂಬ ಹಗ್ಗದ ಬಿರಿಯ ಬಂಧಿಸಿ, ಏಣಿಯ ಯಮಲೋಕಕ್ಕೆ ಹಚ್ಚಿ, ನರಕವ ಭುಂಜಿಸುವ ನರಕಜೀವಿಗಳಿಗೆ ಪ್ರಸಾದಿಗಳೆಂದಡೆ ನಿಮ್ಮ ಶರಣ ಚೆನ್ನಬಸವಣ್ಣ ಕಂಡು, ಇಂತಪ್ಪ ಮೂಳಹೊಲೆಯರ ಮೂಗಕೊಯ್ದು ಮೆಣಸಿನ ಹಿಟ್ಟು ತುಂಬಿ ಮೂಡಲದಿಕ್ಕಿಗೆ ಅಟ್ಟೆಂದ ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.