Index   ವಚನ - 194    Search  
 
ಕೇಳು ಕೇಳಯ್ಯ ಎನ್ನ ಮತ್ಪ್ರಾಣನಾಥ ಬಸವಣ್ಣಲಿಂಗತಂದೆ. ಜಿತೇಂದ್ರಿಯರಲ್ಲಿ ತೀರ್ಥಪ್ರಸಾದ ಇಪ್ಪುದಲ್ಲದೆ ಕೃತಕೇಂದ್ರಿಗಳಲ್ಲಿ ತೀರ್ಥಪ್ರಸಾದ ಇಪ್ಪುದೇನಯ್ಯಾ? ಶಿವಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಪಡೆದು ಲಿಂಗಾಂಗಸಂಬಂಧಿಗಳಾದ ಶಿವಶರಣರಲ್ಲಿ ಪರಶಿವಲಿಂಗ ಇಪ್ಪುದಲ್ಲದೆ, ಭಿನ್ನಜ್ಞಾನಿಗಳಾದ ಅಜ್ಞಾನ ನರಕಜೀವಿಗಳಾದ ಮತಿಭ್ರಷ್ಟಮನುಜರಲ್ಲಿ ಪರಶಿವಲಿಂಗ ಇಪ್ಪುದೇನಯ್ಯ? ಊರ್ಧ್ವಕುಂಡಲಿಯಲ್ಲಿ ಅಮೃತಕುಂಭ ಇಪ್ಪುದಲ್ಲದೆ, ಅಧೋಕುಂಡಲಿಯಲ್ಲಿ ಅಮೃತಕುಂಭ ಇಪ್ಪುದೇನಯ್ಯ? ಚಿತ್ತಸ್ವಸ್ಥಿರವಾದ ಸದ್ಭಕ್ತ ಮಹೇಶ್ವರರ ಹಸ್ತದಲ್ಲಿ ಚಿದ್ಘನಲಿಂಗವಿಪ್ಪುದಲ್ಲದೆ, ಕುಚಿತ್ತ ಕುಬುದ್ಧಿ ದುರ್ಭಾವಿಗಳ ಹಸ್ತದಲ್ಲಿ ಚಿದ್ಘನಲಿಂಗವಿಪ್ಪುದೇನಯ್ಯಾ? ಉದಯದಲ್ಲಿ ಸೂರ್ಯನು ಹೊರಡುವುನಲ್ಲದೆ, ಅಸ್ತಮಾನಕ್ಕೆ ಸೂರ್ಯನು ಹೊರಡುವುನೇನಯ್ಯಾ? ಆಕಾಶದೊಳಗೆ ಮಿಂಚು ಮಿಂಚುವುದಲ್ಲದೆ, ಭೂಮಿಯೊಳಗೆ ಮಿಂಚು ಮಿಂಚುವುದೇನಯ್ಯ? ಇಂತೀ ದೃಷ್ಟದಂತೆ ತನ್ನ ತಾನರಿದಂಥ ಗುರುಹಿರಿಯರಲ್ಲಿ ತೀರ್ಥಪ್ರಸಾದ ಇಪ್ಪುದಲ್ಲದೆ ತನ್ನ ನಿಜವ ಮರೆದು ಮಲತ್ರಯಯುಕ್ತವಾದ ದೇಹೋಹಮೆಂದು ಸಟೆಯ ಸಂಸಾರದಲ್ಲಿ ಮನಮಗ್ನವಾಗಿ ಜಡಸಂಸಾರ ಮಾಡುವ ಜಗಭಂಡ ಹೊಲೆಮಾದಿಗರಲ್ಲಿ ಲಿಂಗವಿಲ್ಲ, ಲಿಂಗವಿಲ್ಲಾಗಿ ತೀರ್ಥಪ್ರಸಾದವಿಲ್ಲ. ಇಂತಪ್ಪ ಜಡಮತಿ ನರಕಜೀವಿಗಳ ವಿಸರ್ಜಿಸಿ, ಸುಜ್ಞಾನೋದಯವಾಗಿ, ಶ್ರೀಗುರುಕಾರುಣ್ಯವ ಪಡೆದು, ಲಿಂಗಾಂಗಸಮರಸವುಳ್ಳ ಗುರುಲಿಂಗಜಂಗಮದ ತೀರ್ಥಪ್ರಸಾದವ ಕೊಂಡಡೆ ನರಕ ತಪ್ಪುವದು. ಮೋಕ್ಷವೆಂಬುದು ಕರತಳಾಮಳಕವಾಗಿ ತೋರುವುದು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.