Index   ವಚನ - 195    Search  
 
ಶಿವ ಶಿವಾ, ನಾವು ಗುರುಲಿಂಗಜಂಗಮದ ತೀರ್ಥಪ್ರಸಾದಸಂಬಂಧಿಗಳೆಂದು ನುಡಿದುಕೊಂಬ ಎಲೆ ಮತಿಭ್ರಷ್ಟ ಮರುಳಮಾನವರಿರಾ, ನೀವು ಕೇಳಿರೋ, ನಾನು ಹೇಳಲಂಜುವೆನು. ಹೇಳಿದರೆ ಜಿಗುಪ್ಸೆ, ಹೇಳುವೆನು ಕೇಳಿರೋ. ಹೊಲಸು ಹಿಡಿಯಬಹುದು, ಪರಸ್ತ್ರೀಗಮನ ಮಾಡಬಾರದು. ಅದೇನು ಕಾರಣವೆಂದಡೆ: ಆ ಹೊಲಸಿನ ದೋಷವು ನೀರಿನಿಂದ ತೊಳೆದರೆ ನಿರ್ಮಲವಾಗಿ ತೋರುವುದು. ಆ ಹೆಂಗಸಿನ ದೋಷವು ನೀರಿನಿಂದ ತೊಳೆದರೆ ಹೋಗದು, ಬೆಂಕಿಯಿಂದ ಸುಟ್ಟರೆ ಹೋಗದು. ಅಂತಪ್ಪ ಹೊಲಸಿಗಿಂತ ಕರಕಷ್ಟವಾದ ಪೊಂಬಣ್ಣದ ಚರ್ಮದ ಹೆಂಗಸಿನ ಶೃಂಗಾರದ ಚಲ್ವಿಕೆಯ ಕಂಡು, ಆಶ್ಚರ್ಯಗೊಂಡು ಬೆಕ್ಕನೆ ಬೆರಗಾಗಿ, ಲಿಂಗಕ್ಕೆ ಹೊರಗಾಗಿ ಆ ಹೆಣ್ಣಿನ ತೊಡೆಯ ಕಣಕಾಲ ಸಂದುಗಳಲ್ಲಿ ಕುಳಿತು, ಲಿಂಗವ ಪಿಡಿವ ಕರದಲ್ಲಿ ಮಲ ಒಸರುವ ಪುಕಳಿಯ ಪಿಡಿದು, ಅಮರ್ದಪ್ಪಿ ಗಲ್ಲವ ಕಡಿದು ಆಕೆಯ ಉಚ್ಚಿ ಪುಚ್ಚಿ, ಜೌಗಿನ ಬಚ್ಚಲಹರಿಗೆ ಮೆಚ್ಚಿ, ನಿಚ್ಚ ನಿಚ್ಚಕ್ಕೆ ಕಚ್ಚಿ ಕಡಿದಾಡುವ ನುಚ್ಚಬಡುಕ ಮರುಳಮಾನವರು, ಗುರುಹಿರಿಯರು, ಜಂಗಮಲಿಂಗಿಗಳೆಂದು ಕರೆತಂದು, ನೀರು, ಕೂಳು ನೀಡಿ ತೀರ್ಥಪ್ರಸಾದವೆಂದು ಹೆಸರಿಟ್ಟು, ದೊಡ್ಡ ದೊಡ್ಡ ಗಡ್ಡದ ಹಿರಿಯರೆಲ್ಲರು ಕೂಡಿ, ದಾಸೋಹ ಮಾಡಿ, ಎದೆ ದಡ್ಡುಗಟ್ಟುವನ್ನಕ್ಕ ಅಡ್ಡಡ್ಡ ಬಿದ್ದು, ಅಯ್ಯಾ, ಹಸಾದ ಮಹಾಪ್ರಸಾದ ಪಾಲಿಸೆಂದು ಪಡಕೊಂಡು, ತಮ್ಮ ಉದರಾಗ್ನಿಯನಡಗಿಸಿಕೊಂಡು, ಎಂಬತ್ತುನಾಲ್ಕುಲಕ್ಷ ಯೋನಿಯಲ್ಲಿ ತಿರುಗುವ ಜಗಭಂಡ ಅಚ್ಚವ್ರತಗೇಡಿ ನಿಜ ಅಪರಾಧಿ ಕತ್ತೆ ಸೂಳೆಮಕ್ಕಳೆಲ್ಲ ತೀರ್ಥಪ್ರಸಾದಸಂಬಂಧ, ನಿತ್ಯ ನಿಜಲಿಂಗೈಕ್ಯ ಸತ್ಯಸದ್ಭಕ್ತರಾಗಬಲ್ಲರೇನಯ್ಯಾ ? ಇಂತಪ್ಪ ಭವಕರ್ಮಿಗಳ ಮುಂದೆ ಲಿಂಗಾಂಗಸಂಗಸಮರಸದ ಅನುಭಾವವ ನುಡಿಯಲಂಜಿ, ಶಬ್ದಮುಗ್ಧನಾಗಿ ಸುಮ್ಮನಿದ್ದನು ಕಾಣಾ ನಿಮ್ಮ ಶರಣನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.