Index   ವಚನ - 201    Search  
 
ಉಣ್ಣಬೇಕು, ಉಡಬೇಕು, ಇಡಬೇಕು, ಭೋಗಿಸಬೇಕೆಂಬರಯ್ಯ. ಉಂಡದ್ದು ಏನಾಯಿತು ? ಉಟ್ಟಿದ್ದು ಏನಾಯಿತು ? ಇಟ್ಟಿದ್ದು ಏನಾಯಿತು ? ಭೋಗಿಸಿದ್ದು ಏನಾಯಿತು ? ಇಂತೀ ವಿಚಾರವ ಬಲ್ಲವರಾದರೆ ಪೇಳಿರಿ, ಅರಿಯದಿದ್ದರೆ ಕೇಳಿರಿ ಎಲೆ ಮರುಳ ಮನುಜರಿರಾ, ಅದೆಂತೆಂದಡೆ : ಮೃಷ್ಟಾನ್ನವಾಗಲಿ, ಕೃಷ್ಣಾನ್ನವಾಗಲಿ ಆವ ಪದಾರ್ಥವಾದಡೇನು ಉಂಡ ಮೂರು ಘಳಿಗೆಯ ಮೇಲೆ ನರಕವಾಗಿ ತೋರುವದು. ಆ ಅನ್ನ ಹೆಚ್ಚಾಗಿ ಕೊಂಡಡೆ ಹೊಟ್ಟೆ ಉಬ್ಬಿ ಕಮರಡರಕಿ ಬಂದು ಕರಸತ್ತ ಮರುವಿನ ಎಮ್ಮೆಯಂತೆ ಪೃಷ್ಠ ಒದರುವದು. ಮತ್ತಂ, ಒಂದು ಹೊನ್ನಾಗಲಿ, ಐದು ಹೊನ್ನಾಗಲಿ, ಹತ್ತು ಹೊನ್ನಾಗಲಿ, ನೂರು ಹೊನ್ನಾಗಲಿ, ಇಂತೀ ಹೊನ್ನು ಮೊದಲಾದ ಹೊನ್ನಿನ ವಸ್ತ್ರ ಶಾಲು ಶಕಲಾತಿ ಮೊದಲಾದ ಆವ ವಸ್ತ್ರವಾದಡೇನು ಉಟ್ಟು ತೊಟ್ಟು ಪೊದ್ದಗಳಿಗೆಯ ಜಾವದಲ್ಲಿ ನಿರಿಬಿದ್ದು ದಡಿ ಮಾಸಿ ಮುಂದೆ ಅವು ವರುಷಾರುತಿಂಗಳಿಗೆ ಸವದು ಹಣ್ಣಹರದು ಹರಿದು ಹೋಗುವವು. ಮತ್ತಂ, ಬೆಳ್ಳಿ ಬಂಗಾರ ಮೊದಲಾದ ವಸ್ತು ಒಡವೆಗಳು ಆವುದಾದರೇನು ಅಂಗದ ಮೇಲೆ ಇಟ್ಟಲ್ಲಿ ದಿನಚರ್ಯ ಮಾಸದ ಕಾಲದಲ್ಲಿ ಸವಸವದು ಸಣ್ಣಾಗಿ ಹೋಗುವದು. ಮತ್ತಂ, ಕನ್ಯಾಕುಮಾರಿ, ಮಿಂಡಿಹೆಣ್ಣು, ತುಂಟರಂಡಿ, ಹಲವಾದ ಸ್ತ್ರೀ ಮೊದಲಾದ ಆವಳಾದರೇನು, ಸಂಗವಾಗದಕ್ಕಿಂತ ಮುನ್ನವೆ ಚಲುವೆ, ಸಂಗವಾದ ಬಳಿಕ ನೀರಿಲ್ಲದ ವೃಕ್ಷ ಮೂಲಸಹವಾಗಿ ಕಿತ್ತು ಚೆಲ್ಲಿದಂತೆ. ಉಭಯ ಸ್ತ್ರೀ ಪುರುಷರ ತನುವು ಜರ್ಜರಿತವಾಗಿ ಸತ್ವಗುಂದಿ ಕೈಕಾಲ ಲಾಡಿ ಸತ್ತು, ಕೈಯ್ಯೂರಿ ಏಳುವರು. ಇಂಥ ಮಾಯಾವಿಲಾಸವ ಶಿವಜ್ಞಾನಿ ಶರಣ ಕಂಡು ಆರೂ ಅರಿಯದೆ ವಿಸರ್ಜಿಸಿ ತನ್ನ ಲಿಂಗದ ನೆನವಿನಲ್ಲಿ ಸ್ವಸ್ಥಿರಚಿತ್ತನಾಗಿರ್ದ ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.