Index   ವಚನ - 214    Search  
 
ನವಖಂಡಪೃಥ್ವಿ ಎಂಬುದು ಪಂಚಶತಕೋಟಿ ಯೋಜನ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣಕ್ಕೆ ಮಂಡಲಾಕಾರವಾದ ಭೂಮಂಡಲ ಒಂದೇ ಅಂತಪ್ಪ ಭೂಮಂಡಲದ ಮಧ್ಯದಲ್ಲಿ ಸಪ್ತಸಮುದ್ರ, ಸಪ್ತದ್ವೀಪಾಂತರ ಹಿಮಾಚಲ ಮಹಾಮೇರುವರ್ಪತ ಮೊದಲಾದ ಅಷ್ಟ ಪರ್ವತಂಗಳು. ಕಾಶಿ, ರಾಮೇಶ್ವರ ಮೊದಲಾದ ಮುನ್ನೂರಾ ಅರುವತ್ತು ಕ್ಷೇತ್ರಂಗಳು. ಕೃಷ್ಣಾ, ಭಾಗೀರಥಿ, ಯಮುನಾ, ಸರಸ್ವತಿ, ಗಂಗಾ ಮೊದಲಾದ ಅರುವತ್ತಾರುಕೋಟಿ ತೀರ್ಥಂಗಳು ಇಂತೀ ತೀರ್ಥಕ್ಷೇತ್ರಂಗಳ ತೆತ್ತೀಸಕೋಟಿ ದೇವರ್ಕಳು ಸ್ಥಾಪಿಸಿದರು. ಮತ್ತಂ, ಮಂದಮತಿಗಳಾದ ಜೀವಾತ್ಮರು ಕೂಡಿ, ಇದು ದೇವಭೂಮಿ, ಇದು ಹೊಲೆಭೂಮಿ, ಇದು ಮಠಮಾನ್ಯದ ಭೂಮಿ, ಇದು ಗ್ರಾಮ ಗೃಹದ ಭೂಮಿ, ಇದು ಲಿಂಗಸ್ಥಾಪನೆಯಾದ ರುದ್ರಭೂಮಿ, ಇದು ಶ್ಮಶಾನ ಭೂಮಿ ಎಂದು ಹೆಸರಿಟ್ಟು ಸ್ಥಾಪನೆಯ ಮಾಡುವಿರಿ. ಎಲಾ ದಡ್ಡ ಪ್ರಾಣಿಗಳಿರಾ, ಇದಕೊಂದು ದೃಷ್ಟವ ಪೇಳ್ವೆ ಕೇಳಿರಯ್ಯಾ. ಅದೆಂತೆಂದೊಡೆ : ಒಂದು ನದಿಯಲ್ಲಿ ಕೋಲು ಹಾಕಿ, ಗೆರೆಯ ಬರೆದು ಎರಡು ಮಾಡಿ, ಇದು ಸೀ ಉದಕ, ಇದು ಲವಣೋದಕವೆಂದಡೆ ಆಗಬಲ್ಲುದೇನಯ್ಯಾ ? ಆಗಲರಿಯದು. ಮತ್ತಂ, ಒಂದೇ ಬೇವಿನಮರದೊಳಗೆ ಒಂದು ಶಾಖೆಗೆ ಮಾವಿನಹಣ್ಣು, ಒಂದು ಶಾಖೆಗೆ ಬೇವಿನಹಣ್ಣು, ಒಂದು ಶಾಖೆಗೆ ಬಾಳೆಯಹಣ್ಣು, ಒಂದು ಶಾಖೆಗೆ ಹಸಲು, ನೀರಲಹಣ್ಣು, ಆಗೆಂದಡೆ ಆಗಬಲ್ಲವೇನಯ್ಯಾ ? ಆಗಲರಿಯವು ಎಂಬ ಹಾಗೆ. ಇಂತೀ ದೃಷ್ಟದಂತೆ ಒಂದು ನವಖಂಡಮಂಡಲಭೂಮಿಯೊಳಗೆ, ಇದು ಮಂಗಲಭೂಮಿ, ಇದು ಅಮಂಗಳಭೂಮಿ, ಇದು ಶುದ್ಧಭೂಮಿ, ಇದು ಅಶುದ್ಧಭೂಮಿ, ಎಂದಡೆ ಆಗಬಲ್ಲವೇನಯ್ಯಾ ? ಆಗಲರಿಯವು. ಅದೇನು ಕಾರಣವೆಂದಡೆ : ಆದಿ ಅನಾದಿಯಿಂದತ್ತತ್ತಲಾದ ಪರಶಿವನ ಮಹಾ ಪ್ರಸಾದದಿಂದುದ್ಭವಿಸಿದ ಬ್ರಹ್ಮಾಂಡವು, ಒಮ್ಮೆ ಶುದ್ಧ ಒಮ್ಮೆ ಅಶುದ್ಧವಾಗಬಲ್ಲುದೆ ಎಲೆ ಮರುಳ ಮನುಜರಿರಾ. ನಿಮ್ಮ ಮನದ ಸಂಕಲ್ಪ ವಿಕಲ್ಪದಿಂ ಶುದ್ಧ ಅಶುದ್ಧವಾಗಿ ತೋರುವುದಲ್ಲದೆ. ನಿಮ್ಮ ಮನದ ಸಂಕಲ್ಪವನಳಿದಡೆ ಸಕಲಬ್ರಹ್ಮಾಂಡಗಳೆಲ್ಲ ನಿರ್ಮಳವಾಗಿ ತೋರುವವು. ನಿಮ್ಮ ಮನದ ಸಂಕಲ್ಪವನಳಿಯದಿರ್ದಡೆ ಸಕಲಬ್ರಹ್ಮಾಂಡಗಳೆಲ್ಲ ಅಮಂಗಳವಾಗಿ ತೋರುವವು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.