Index   ವಚನ - 258    Search  
 
ಗುರುಪೂಜೆ ಮಾಡುವಾತ ಶಿಷ್ಯನಲ್ಲ. ಲಿಂಗಪೂಜೆ ಮಾಡುವಾತ ಶರಣನಲ್ಲ. ಜಂಗಮಪೂಜೆ ಮಾಡುವಾತ ಭಕ್ತನಲ್ಲ. ಇಂತೀ ತ್ರಿಮೂರ್ತಿಗಳ ಪಾದೋದಕ ಪ್ರಸಾದವ ಕೊಂಬುವಾತ ಪ್ರಸಾದಿಯಲ್ಲ. ಇಂತೀ ಚತುರ್ವಿಧದ ಹಂಗು ಹಿಂಗದೆ ಭವಹಿಂಗದು ಮುಕ್ತಿದೋರದು. ಮತ್ತಂ, ಇಂತೀ ತ್ರಿವಿಧ ಪೂಜೋಪಚಾರಂಗಳಮಾಡಿ ಪಾದೋದಕ ಪ್ರಸಾದವ ಕೊಳ್ಳದವರಿಗೆ ಭವಹಿಂಗದು ಮುಕ್ತಿದೋರದು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.