Index   ವಚನ - 260    Search  
 
ಮಲವ ಭುಂಜಿಸುವ ಶೂಕರನಿಗೆ ಮದಗಜವ ಹೋಲಿಸಿದರೆ ಆ ಶೂಕರ ಮದಗಜವಾಗಬಲ್ಲುದೆ ? ಎಲುಬು ಕಡಿಯುವ ಶುನಿಗಳಿಗೆ ಗಜವೈರಿಯ ಹೋಲಿಸಿದರೆ ಆ ಶುನಿಗಳು ಗಜವೈರಿಯಾಗಬಲ್ಲುವೆ ? ಇಲಿಯ ತಿಂಬುವ ಮಾರ್ಜಾಲನಿಗೆ ಮಹಾವ್ಯಾಘ್ರನ ಹೋಲಿಸಿದರೆ ಆ ಮಾರ್ಜಾಲ ಮಹಾವ್ಯಾಘ್ರನಾಗಬಲ್ಲುದೆ ? ಹೊಲಸುತಿಂಬುವ ಕಾಗಿಯ ಮರಿಗೆ ಕೋಗಿಲೆಯ ಹೋಲಿಸಿದರೆ ಆ ಕಾಗಿಯಮರಿ ಸುನಾದಸ್ವರ ಕೋಗಿಲಮರಿಯಾಗಬಲ್ಲುದೆ ? ಕಸವ ತಿಂಬುವ ಕತ್ತೆಗೆ ಕುದುರೆಯ ಹೋಲಿಸಿದರೆ ಆ ಕತ್ತೆ ಮಹಾತೇಜಿಯಾಗಬಲ್ಲುದೆ ? ಕಸ ನೀರು ಹೊರುವ ದಾಸಿಗೆ ಅರಸಿಯ ಹೋಲಿಸಿದರೆ ಆ ದಾಸಿಯು ಅರಸಿಯಾಗಬಲ್ಲಳೆ ? ಈಚಲ ಕಾಡಿನಮರಕ್ಕೆ ಟೆಂಗಿನಮರ ಹೋಲಿಸಿದರೆ ಆ ಈಚಲ ಕಾಡಿನಮರ ಎಳೆಯ ಟೆಂಗಿನಮರವಾಗಬಲ್ಲುದೆ ? ನೀರೊಳಗಣ ಕೋಳಿಗೆ ಕೊಳದೊಳಗಣ ಹಂಸನ ಹೋಲಿಸಿದರೆ ಆ ನೀರಕೋಳಿಯು ರಾಜಹಂಸನಾಗಬಲ್ಲುದೆ ? ತಿಪ್ಪೆಯೊಳಗಣ ಪುಳವತಿಂಬುವ ಕೋಳಿಗೆ ಪಂಜರದೊಳಗಣ ಗಿಣಿಯ ಹೋಲಿಸಿದರೆ ಆ ಕೋಳಿಯು ಅರಗಿಳಿಯಾಗಬಲ್ಲುದೆ ? ಇಂತೀ ದೃಷ್ಟದ ಹಾಗೆ ಲೌಕಿಕದ ಜಡಮತಿ ಮನುಜರಿಗೆ ಶಿವಜ್ಞಾನಸಂಪನ್ನರಾದ ಶರಣರ ಹೋಲಿಸಿದರೆ, ಆ ಮಂದಮತಿ ಜೀವರು ಶಿವಜ್ಞಾನಿಗಳಾದ ಶಿವಶರಣರಾಗಬಲ್ಲರೆ ? ಈ ಭೇದವ ತಿಳಿಯಬಲ್ಲರೆ ಕೂಡಲ ಚನ್ನಸಂಗಯ್ಯನ ಶರಣರೆಂಬೆ. ಇದ ತಿಳಿಯದಿದ್ದರೆ ಭವಭಾರಿಗಳೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.