Index   ವಚನ - 271    Search  
 
ಪಾದೋದಕ ಪ್ರಸಾದಗಳೆಂದೆಂಬಿರಿ, ಪಾದೋದಕ ಪ್ರಸಾದದ ಬಗೆಯ ಪೇಳ್ವೆ. ಗದ್ದುಗೆಯ ಮೇಲೆ ಗದ್ದುಗೆಯ ಹಾಕಿ, ಜಂಗಮಲಿಂಗಿಗಳ ಕರತಂದು ಕುಳ್ಳಿರಿಸಿ, ಧೂಪ ದೀಪ ಪತ್ರಿ ಪುಷ್ಪದಿಂದ ಪಾದಪೂಜೆಯ ಮಾಡಿ, ಕೆರೆ ಬಾವಿ ಹಳ್ಳ ಕೊಳ್ಳ ನದಿ ಮೊದಲಾದವುಗಳ ನೀರ ತಂದು- ಬ್ರಹ್ಮರಂಧ್ರದಲ್ಲಿರುವ ಸತ್ಯೋದಕವೆಂದು ಮನದಲ್ಲಿ ಭಾವಿಸಿ, ಆ ಜಂಗಮದ ಉಭಯಪಾದದ ಮೇಲೆರೆದು, ಪಾದೋದಕವೇ ಪರಮತೀರ್ಥವೆಂದು ಲಿಂಗ ಮುಂತಾಗಿ ಸೇವಿಸಿ, ನವಖಂಡಪೃಥ್ವಿಯಲ್ಲಿ ಬೆಳೆದ ಹದಿನೆಂಟು ಜೀನಸಿನ ಧಾನ್ಯವ ತಂದು, ಉದಕದಲ್ಲಿ ಹೆಸರಿಟ್ಟು, ಅಗ್ನಿಯಲ್ಲಿ ಪಾಕವಮಾಡಿ, ತಂದು ಜಂಗಮಕ್ಕೆ ಎಡೆಮಾಡಿ, ಜಂಗಮವು ತನ್ನ ಲಿಂಗಕ್ಕೆ ಅರ್ಪಿಸಿ ಸೇವಿಸಿದಬಳಿಕ ತಾವು ಪ್ರಸಾದವೇ ಪರಬ್ರಹ್ಮವೆಂದು ಭಾವಿಸಿ, ಕೊಂಡು ಸಲಿಸುವರಯ್ಯ. ಇಂತೀ ಕ್ರಮದಿಂದ ಕೊಂಬುದು ಪಾದೋದಕಪ್ರಸಾದವಲ್ಲ. ಇಂತೀ ಉಭಯದ ಹಂಗು ಹಿಂಗದೆ ಭವಹಿಂಗದು, ಮುಕ್ತಿದೋರದು. ಮತ್ತಂ, ಹಿಂದಕ್ಕೆ ಪೇಳಿದ ಕ್ರಮದಿಂದಾಚರಿಸಿ, ಗುರುಲಿಂಗಜಂಗಮದಲ್ಲಿ ಪಾದೋದಕ ಪ್ರಸಾದವ ಸೇವಿಸಬಲ್ಲವರಿಗೆ ಪ್ರಸಾದಿಗಳೆಂಬೆ. ಇಂತಪ್ಪವರಿಗೆ ಭವ ಹಿಂಗುವದು, ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವುದು. ಈ ಪಾದೋದಕದ ಭೇದವ ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮುಖ್ಯವಾದ ಏಳುನೂರೆಪ್ಪತ್ತು ಪ್ರಮಥಗಣಂಗಳು ಬಲ್ಲರಲ್ಲದೆ ಮಿಕ್ಕಿನ ಜಡಮತಿ ಕಡುಪಾತಕರಾದ ಭಿನ್ನಭಾವ ಜೀವಾತ್ಮರೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ ನಿರ್ಮಾಯಪ್ರಭುವೆ.