Index   ವಚನ - 272    Search  
 
ಕರಿಯ ಕಂಬಳಿಯ ಮೇಲೆ ಬಿಳಿಯ ಪಾವಡವ ಹಾಕಿ, ಮಲತ್ರಯಯುಕ್ತವಾದ ಒಬ್ಬ ಹೊಲಸು ಪೃಷ್ಠದ ನರಮನುಜನ ಜಂಗಮನೆಂದು ಕರತಂದು ಗದ್ದುಗೆಯ ಮೇಲೆ ಕುಳ್ಳಿರಿಸಿ, ಅವರ ಎದುರಿಗೆ ತಪ್ಪುತಡಿಯ ಮಾಡಿದ ಪಾತಕರ ಅಡ್ಡಗೆಡವಿ ಮೂಗಿನ ದಾರಿ ತೆಗೆವರಂತೆ, ಹೊಟ್ಟೆಗಿಲ್ಲದೆ ಒಬ್ಬ ಬಡವನು ಧನಿಕನ ಮುಂದೆ ಅಡ್ಡಬಿದ್ದು ಬೇಡಿಕೊಳ್ಳುವಂತೆ, ಇಂತೀ ದೃಷ್ಟಾಂತದಂತೆ ಆಶೆ ಆಮಿಷ ತಾಮಸದಿಂದ ಮಗ್ನರಾದ ಭೂತದೇಹಿಗಳ ಮುಂದೆ ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಮಲವ ಕಚ್ಚಿ, ಸಂಸಾರವಿಷಯದಲ್ಲಿ ಮಗ್ನರಾದ ಪಾತಕ ಮನುಜರು ಅಡ್ಡಬಿದ್ದು ಪಾದಪೂಜೆಯ ಮಾಡಿ ಪಾದೋದಕಪ್ರಸಾದ ಕೊಂಬುವರು. ಇವರು ಭಕ್ತರಲ್ಲ, ಅವನು ಜಂಗಮನಲ್ಲ. ಇಂತವರು ಕೊಂಬುವದು ಪಾದೋದಕಪ್ರಸಾದವಲ್ಲ. ಇಂತಪ್ಪ ದೇವಭಕ್ತರ ಆಚರಣೆ ನಡತೆಯೆಂತಾಯಿತೆಂದೊಡೆ ದೃಷ್ಟಾಂತ: ಒಬ್ಬ ಜಾರಸ್ತ್ರೀ ತನ್ನ ಉದರಪೋಷಣಕ್ಕೆ ಆಶೆಯ ಮಾಡಿ, ಒಬ್ಬ ವಿಟಪುರುಷನ ಸಂಗವಮಾಡಿದರೆ ಅವನು ಪರುಷನಾಗಲರಿಯನು, ಅವಳು ಸತಿಯಾಗಲರಿಯಳು. ಅದೇನು ಕಾರಣವೆಂದೊಡೆ ಹೊನ್ನಿಗಲ್ಲದೆ. ಮತ್ತಂ, ಆವನೊಬ್ಬ ಜಾತಿಹಾಸ್ಯಗಾರನು ರಾಜರ ಮುಂದೆ ತನ್ನ ಜಾತಿಆಟದ ಸೋಗನ್ನೆಲ್ಲ ತೋರಿ ಆ ರಾಜರ ಮುಂದೆ ನಿಂತು ಮಜುರೆಯ ಮಾಡಿ ಮಹಾರಾಜಾ ಎನ್ನೊಡೆಯ ಎನ್ನ ತಂದೆಯೇ ಎಂದು ಹೊಗಳಿ ನಿಮ್ಮ ಹೆಸರು ತಕ್ಕೊಂಡು ದೇಶದಮೇಲೆ ಕೊಂಡಾಡೇನೆಂದು ಬೇಡಿಕೊಂಡು ಹೋಗುವನಲ್ಲದೆ ಅವನು ತಂದೆಯಾಗಲರಿಯನು, ಇವನು ಮಗನಾಗಲರಿಯನು. ಅದೇನು ಕಾರಣವೆಂದೊಡೆ: ಒಡಲಕಿಚ್ಚಿಗೆ ಬೇಡಿಕೊಳ್ಳುವನಲ್ಲದೆ. ಇಂತೀ ದೃಷ್ಟಾಂತದಂತೆ ಒಡಲ ಉಪಾಧಿಗೆ ಪೂಜೆಗೊಂಬರು ವ್ರತನಿಯಮನಿತ್ಯಕ್ಕೆ ಪೂಜೆಯ ಮಾಡುವರು ಅವರು ದೇವರಲ್ಲ, ಇವರು ಭಕ್ತರಲ್ಲ. ಅದೇನು ಕಾರಣವೆಂದೊಡೆ- ಉಪಾಧಿ ನಿಮಿತ್ಯಕಲ್ಲದೆ. ಇಂತಪ್ಪ ವೇಷಧಾರಿಗಳಾದ ಭಿನ್ನ ಭಾವದ ಜೀವಾತ್ಮರ ಪ್ರಸಾದವೆಂತಾಯಿತೆಂದಡೆ ತುರುಕ ಅಂತ್ಯಜರೊಂದುಗೂಡಿ ಸರ್ವರೂ ಒಂದೇ ಆಗಿ ತೋಳ ಬೆಕ್ಕು ನಾಯಿಗಳ ತಿಂದ ಹಾಗೆ, ಸರ್ವರೂ ತಿಂದು ಹೋದಂತೆ ಆಯಿತಯ್ಯ. ಇಂತಪ್ಪವರಿಗೆ ಭವಹಿಂಗದು ಮುಕ್ತಿದೋರದು. ಮತ್ತಂ, ಅದೆಂತೆಂದೊಡೆ: ತನುವೆಂಬ ಭೂಮಿಯ ಮೇಲೆ ಮನವೆಂಬ ಕರಿಕಂಬಳಿಯ ಗದ್ದುಗೆಯ ಹಾಕಿ, ಅದರ ಮೇಲೆ ಪರಮಶಾಂತಿ ಜ್ಞಾನವೆಂಬ ಮೇಲುಗದ್ದುಗೆಯನಿಕ್ಕಿ, ಅಂತಪ್ಪ ಪರಮಶಾಂತಿಯೆಂಬ ಮೇಲುಗದ್ದಿಗೆಯ ಮೇಲೆ ಸತ್ತುಚಿತ್ತಾನಂದ ನಿತ್ಯಪರಿಪೂರ್ಣಭರಿತವಾದ ಪರಮನಿರಂಜನವೆಂಬ ಜಂಗಮವ ಮೂರ್ತವ ಮಾಡಿಸಿ, ಪಾದಪೂಜೆಯ ಮಾಡಿ ಪಾದೋದಕ ಪ್ರಸಾದವ ಕೊಳ್ಳಬಲ್ಲರೆ ಆತ ಆನಾದಿ ಭಕ್ತ. ಇಂತೀ ಭೇದವ ತಿಳಿದು ಕೊಡಬಲ್ಲರೆ ಆತ ಅನಾದಿ ಜಂಗಮ. ಇಂತಪ್ಪವರಿಗೆ ಭವಬಂಧನವಿಲ್ಲ, ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವದು. ಇಂತಪ್ಪ ವಿಚಾರವನು ಸ್ವಾನುಭಾವಜ್ಞಾನದಿಂ ತಿಳಿಯದೆ ಅಜ್ಞಾನದಿಂದ ಮಾಡುವ ಮಾಟವೆಲ್ಲ ಜೊಳ್ಳು ಕುಟ್ಟಿ ಹೊಳ್ಳು ಗಾಳಿಗೆ ತೂರಿದಂತೆ ಆಯಿತ್ತು ನೋಡೆಂದ ನಿಮ್ಮ ಶರಣ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.