Index   ವಚನ - 287    Search  
 
ಹರಿವ ನೀರ ಉರಿಕೊಂಡದಲ್ಲಿ ಅರಗಿನ ಭೂಮಿ ಕರಗದಿರುವದ ಕಂಡೆ. ನವಗೋಪುರಯುಕ್ತವಾದ ಆಕಾಶದಲ್ಲಿ ಒಂದೂರ ಕಂಡೆ. ಸತಿಪತಿಸಹಿತವಾಗಿ ನವಮುಗ್ಧರಿರುವದ ಕಂಡೆ. ಊರ ನಡುವೆ ಸಹಸ್ರ ಶತಪಂಚತ್ರಯ ಏಕಕಾನಿಯ ಪಂಜರವ ಕಂಡೆ. ಅಗ್ನಿವರ್ಣ ಶ್ವೇತಮುಖದ ಗಿಳಿಯ ಕಂಡೆ. ಹಲವರು ಗಿಳಿಯ ಕಂಡು ಸಂತೋಷಬಟ್ಟು ರಕ್ಷಿಸಿ ಉಣ್ಣದೆ ಉಂಡು ಹೋಗುವದ ಕಂಡೆ. ನಾನು ಗಿಳಿಯ ಕಂಡು ಸಂತೋಷಬಟ್ಟು ರಕ್ಷಿಸಿ ಉಂಡು ಉಣ್ಣದೆ ಹೋಗುವದ ಕಂಡೆ. ಹಡದವರು ಸತ್ತು, ಹಡಿಯದವರು ಉಳಿದರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.