Index   ವಚನ - 296    Search  
 
ಶರಣನಾದೊಡೆ ಅಚ್ಚೊತ್ತಿದ ಅರಿವಿಯಂತಿರಬೇಕು ಲಿಂಗದಲ್ಲಿ. ಶರಣನಾದೊಡೆ ಮುರಿದ ಬಂಗಾರ ಬೆಳ್ಳಾರದಲ್ಲಿ ಬೆಚ್ಚಂತೆ ಇರಬೇಕು ಲಿಂಗದಲ್ಲಿ. ಶರಣನಾದೊಡೆ ಪುಷ್ಪ-ಪರಿಮಳದಂತೆ, ಪ್ರಭೆ-ಪಾಷಾಣದಂತೆ, ಜ್ಯೋತಿ-ಪ್ರಕಾಶದಂತೆ ಇರಬೇಕು ಲಿಂಗದಲ್ಲಿ. ಶರಣನಾದೊಡೆ ಸೂರ್ಯನ ಕಿರಣದಂತೆ, ಚಂದ್ರನ ಕಾಂತಿಯಂತೆ, ಗಾಳಿ-ಗಂಧದಂತೆ, ಜಾಗಟಿ-ನಾದದಂತೆ ಇರಬೇಕು ಲಿಂಗದಲ್ಲಿ. ಇಷ್ಟುಳ್ಳಾತನೇ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.