Index   ವಚನ - 303    Search  
 
ಮೂರಾರು ಕಂಡಿಕಿ ದಂಡಿಗಿಗೆ ಮೂರಾರು ಬಟ್ಟಗಾಯ ಕಟ್ಟಿ, ಈರೆಂಟು ಮೆಟ್ಟಿ, ಆರೊಂದು ತಂತಿಯ ಹೂಡಿ, ಕರವ ಕಟ್ಟಿ, ಬಿರಡಿಯ ತಿರುಹಿ, ಮೂರು ಬೆರಳಿನಲ್ಲಿ ಕಿನ್ನರಿಯ ಹೊಡೆದು ಬೀದಿಬಾಜಾರದಲ್ಲಿ ತಿರುಗುತ್ತಿರುವಲ್ಲಿ, ತಿರುಗುವದ ಜೋಗಿ ಕಂಡು ಕಕ್ಕನ ಕಿನ್ನರಿಯಕಾಯನೊಡೆದು ದಂಡಗಿಯ ಮುರಿದುಹಾಕಿತ್ತು. ತಂತಿಯ ಹರಿದು, ಬಿರಡಿಯನುಚ್ಚಿ, ಕುದುರಿಯ ಸುಟ್ಟು, ಬೆರಳ ಮುರಿದು ಡೋಹಾರನ ಕೊಂದು, ಡೋಹಾರ ಕಕ್ಕಯ್ಯನ ಮನೆಯಲ್ಲಿ ಜೋಗಿ ಅಡಗಲು, ಅಡಗಿದ ಜೋಗಿಯು ಸತ್ತು, ಡೋಹಾರ ಕಂಡು ಎದ್ದು ಕಾಯಕವ ಮಾಡುತಿರ್ದರಯ್ಯ ನಿಮ್ಮ ಶರಣರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.