Index   ವಚನ - 427    Search  
 
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಮಲವ ಪಿಡಿದು ಆಚರಿಸುವದು ಲೌಕಿಕವಲ್ಲ. ಸತಿಸುತರ ಪಿಡಿದು ಮನಿಮಾರು ಕಟ್ಟಿ ಪ್ರಪಂಚಮಾಡುವದು ಲೌಕಿಕವಲ್ಲ. ಸಕಲ ಪ್ರಪಂಚಿನ ವ್ಯವಹಾರದಲ್ಲಿ ಇರ್ದಡೆಯು ಲೌಕಿಕವಲ್ಲ. ಇನ್ನಾವುದು ಲೌಕಿಕವೆಂದಡೆ, ತನ್ನ ಸ್ವಸ್ವರೂಪ ಪರಂಜ್ಯೋತಿಸ್ವರೂಪವೆಂಬುದ ಮರದು ಪಂಚಭೂತದೇಹಸ್ವರೂಪ ನಾನೆಂದು ಇರುವುದೇ ಲೌಕಿಕ. ತನ್ನ ಸ್ವಯಾತ್ಮಜ್ಞಾನವೆಂಬ ಸ್ವಾನುಭಾವಜ್ಞಾನದ ಎಚ್ಚರವ ಮರತು ಅಜ್ಞಾನಜೀವನಾಗಿ ಮಾಯಾಪ್ರಪಂಚಿನ ಮರವೆಯಲ್ಲಿರುವುದೇ ಲೌಕಿಕ. ಶ್ರೀಗುರುಕರುಣದಿಂ ಪಡಕೊಂಡ ಕರಕಮಲದ ಲಿಂಗಾಂಗದ ಸಮರಸವನರಿಯದೆ ಅಂಗಮುಖದಲ್ಲಿ ಸಂಚರಿಸುವದು ಲೌಕಿಕ. ಈ ವಚನದ ತಾತ್ಪರ್ಯಾರ್ಥವನರಿಯದವರು ಲೌಕಿಕರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.