Index   ವಚನ - 6    Search  
 
ಅಯ್ಯಾ, ಯತಿಯತ್ವವ ಪಡೆದೆನೆಂಬೋ ಮನುಜನೇ, ನೀ ಕೇಳು: ನಿನ್ನ ಯತಿಯತ್ವದ ಬಗೆ ಎಂತೆಲಾ? ಬರಿದೆ ದ್ರವ್ಯಕ್ಕೆ ಆಶೆಮಾಡಿ, ಪರರ ಕಾರ್ಪಣ್ಯದಿಂದ ಕಾಡಿ ಬೇಡಿ, ದ್ರವ್ಯವ ಗಳಿಸಿಕೊಂಡು, ಜನರ ಕಟ್ಟಿಕೊಂಡು ಬಡಿವಾರದಿಂದ ತಿರುಗಿದ ಬಳಿಕ, ನಿನಗೆ ಯತಿಯತ್ವವು ಎಲ್ಲೈತೆಲಾ? ಅದು ಎಂತೆಂದರೆ, ಯತಿಯತ್ವವ ಪೇಳುವೆನು ಕೇಳೆಲಾ: ಯತಿ ನೀನಾದ ಬಳಿಕ ತನುವಿನ ಹಂಗು ಹರಿಯಬೇಕು; ಮನವ ಘನಲಿಂಗಕ್ಕೆ ಕಟ್ಟಿಹಾಕಬೇಕು; ಧನವ ಸ್ವಪ್ನದಲ್ಲಿ ಮುಟ್ಟಲಾಗದು; ಅನ್ನದ ಆಸೆಯ ಬಿಡಬೇಕು; ಚಿನ್ಮಯನಾಗಿ ನಡೆಯಬೇಕು; ಚಿಂತೆಯ ಮರೆತು ವೈರಾಗ್ಯದಿಂದಿರಬೇಕು; ಕಾಮದ ಹಂಗ ಕಳೆಯಬೇಕು; ಕರ್ಮೇಂದ್ರಿಯಂಗಳ ಸುಡಬೇಕು; ಲಿಂಗದಲ್ಲಿ ಕರುಣ ಇರಬೇಕು. ಸ್ಫಟಿಕದಂತೆ ನಿರ್ಮಳ ಕಾಯನಾಗಿ, ನಿಶ್ಚಿಂತನಾಗಿ, ಮೋಕ್ಷವ ಕಂಡಡೆ ಯತಿವರನೆಂದು ನಮೋ ಎಂಬುವೆನಯ್ಯಾ! ಬರಿದೆ ಯತಿ ಎನಿಸಿಕೊಂಡು ಕೋಪಾಟೋಪದೊಳು ಬಿದ್ದು ಹೊರಳಾಡುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ