Index   ವಚನ - 7    Search  
 
ಷಟುಸ್ಥಲದ ಬ್ರಹ್ಮಿಗಳೆಂದು ಹೇಳಿಕೊಂಬಿರಿ, ನೀವು ಕೇಳಿರಯ್ಯಾ: ನಿಮ್ಮ ಷಟುಸ್ಥಲದ ಬ್ರಹ್ಮಿಗಳ ಲಕ್ಷಣ ದಾವುದೆಂದಡೆ, ಅಂಗಲಿಂಗ ಸಂಬಂಧವಾದುದೇ ಷಟುಸ್ಥಲ. ಅಂಗ ಲಿಂಗವಾದ ಪರಿ ಎಂತೆಂದಡೆ, ಲಿಂಗ ಪೋದುದೇ ಷಟುಸ್ಥಲ: ಗ್ರಂಥ || ಅನಾದಿ ಸಂಸಿದ್ಧಸ್ಯ ಆತ್ಮಪರೀಕ್ಷಣಂ ಜಗತಾರಾ[ಧ್ಯಸ್ಯ] | ಸತ್ಯಂ ಜನನಮರಣವಿರಹಿತಂ [ಇತಿ]ಷಟ್‍ಸ್ಥಲಂ || ಇಂತೀ ಸಾಕ್ಷಿ ಉಂಟಾಗಿ, ಪರಾನ್ನ ಅಪೇಕ್ಷಿತನಾಗದೆ, ಪರಸ್ತ್ರೀಯಂ ನೋಡದೆ, ಪರರೊಡವೆಯ ಹಂಗು ಹಚ್ಚದೆ, ಪರಾತ್ಪರವಾಗಿಪ್ಪುದೆ ಜಂಗಮ ಲಿಂಗ. ಪರಮ ಹರುಷದಿಂದ ಪಾತಕವನೀಡಾಡಿ, ಪರ[ಮ] ಪುರುಷಾರ್ಥವನೇ ಗ್ರಹಿಸಿ, ಪಾವನಚರಿತನಾಗಿ, ಭಕ್ತನ ಮನೆಗೆ ನಡೆದು ಬಂದು ಬೀಯೆಂಬೋ ಪಾಪವು ಕ್ಷಯವಾಗಲೆಂದು 'ಭಿಕ್ಷಾ' ಎಂದು ನಿಂದಡೆ, ಅರಿದ ಭಕ್ತ ನೀಡಿದರೂ ಸಂತೋಷ ಅರಿಯದಿದ್ದ ಭಕ್ತ ನೀಡದಿದ್ದರೂ ಸಂತುಷ್ಟನಾಗಿ 'ಹಳ್ಳಿಗೇಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ' ಸಂಚರಿಸುತಿರ್ಪುದೇ ಷಟುಸ್ಥಲದ ಬ್ರಹ್ಮಿ ಎಂದು ನಮೋ ಎಂಬುವೆನಯ್ಯಾ ಬರಿದೆ 'ನಾ ಷಟುಸ್ಥಲದ ಬ್ರಹ್ಮಿ' 'ನೀ ಷಟುಸ್ಥಲದ ಬ್ರಹ್ಮಿ' ಎಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ