Index   ವಚನ - 11    Search  
 
ಎಲಾ, ಶೈವ ವೀರಶೈವ ಎಂಬುವವು ಉಭಯ ಮತಗಳುಂಟು. ಅವು ಎಂತೆಂದಡೆ, ಸ್ಥಾಪ್ಯಲಿಂಗವ ಪೂಜೆಮಾಡುವುದೇ ಶೈವ; ಗುರುವು ಕೊಟ್ಟ ಇಷ್ಟಲಿಂಗವ ಪೂಜೆಮಾಡುವುದೇ ವೀರಶೈವ. ಅದರೊಳಗೆ ಲಿಪ್ತವಾಗಿರ್ಪರೇ ಭಕ್ತರು, ನೀವು ಕೇಳಿರಯ್ಯಾ: ಸ್ಥಾಪ್ಯಲಿಂಗವ ಪೂಜಿಸಿದ ಕರ ಪೋಗಿ ಪರಸ್ತ್ರೀಯರ ಕುಚಂಗಳ ಪಿಡಿಯಬಹುದೆ? ಈಗ ಯತಿಯ ನುಡಿದ ಜಿಹ್ವೆ ಪೋಗಿ ಪರಸ್ತ್ರೀಯರ ಅಧರಪಾನ ಮಾಡಬಹುದೆ? ಮಹಾಮಂತ್ರವ ಕೇಳಿದ ಕರ್ಣ ಪೋಗಿ ಪರತಂತ್ರವ ಕೇಳಬಹುದೆ? ಲಿಂಗಪೂಜಕರ ಅಂಗ ಪೋಗಿ ಪರರಂಗವನಪ್ಪಬಹುದೆ? ಇವನು ಶೈವ ಭಕ್ತನಲ್ಲಾ! ಶೈವನಾಗಲಿ ವೀರಶೈವನಾಗಲಿ ಏಕಲಿಂಗನಿಷ್ಠಾಪರನಾಗಿ, ಅಷ್ಟಮದಂಗಳೊಳ್ದಳಗೊಂಡು ಸಂಹರಿಸಿ, ಪಂಚಕ್ಲೇಶ ದುರಿತ ದುರ್ಗುಣಗಳ ಕಳೆದುಳಿದು, ಆರು ಚಕ್ರವ ಹತ್ತಿ ಮೀರಿದ ಸ್ಥಲದೊಳಗಿಪ್ಪ ಲಿಂಗಮಂ ಪೂಜಿಸಿ, ಮೋಕ್ಷಮಂ ಪಡೆದಡೆ, ವೀರಶೈವನೆಂದು ನಮೋ ಎಂಬುವೆನಯ್ಯಾ ಬರಿದೆ ವೀರಶೈವನೆಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ