ಎಲಾ, ದೇವರು ಹಿಡಿಯಿತೆಂಬೋ
ನಾಯಿಮಗನೇ ನೀ ಕೇಳು:
ಎಲಾ, ಹಿಂದಕ್ಕೆ ಅನಂತ ಋಷಿಗಳು
ದೇವರ ಕುರಿತು ತಪಸ್ಸುಮಾಡಿ
ದೇವರ ಕಾಣದೆ ಪೋದರು.
ತ್ರಿಕಾಲದಲ್ಲಿ ಮಹಾಪುರುಷರು ಶಿವಪೂಜೆ ಅಂಗೀಕರಿಸಿ,
ಕೋಟ್ಯಂತರ ದ್ರವ್ಯವನ್ನು ಜಂಗಮಕ್ಕೆ ನೀಡಿ, ಮಾಡಿ,
ಸ್ವಪ್ನದಲ್ಲಿ ದೇವರ ಪಾದವ ಕಾಣದೆ ಹೋದರು.
ಈಗಿನವರು ಮಹಾಮಲಿನವಾದ ಕಾಯಕೂಷ್ಣವೂಷ್ಣವು(?),
ಬಿಷ್ಣದ(?) ದೇಹ, ಕನಿಷ್ಟದ ನಡತೆ, ಕಾರ್ಕೋಟಕ ಬುದ್ಧಿ
ಕರ್ಮೇಂದ್ರಿಯಂಗಳಲ್ಲಿ ಹೊರಳಾಡುವ ಹೊಲೆಯ[ರಿ]ಂಗೆ
ದೇವರೆಲ್ಲೈತೆಲಾ?
ಆದರೂ ಚಿಂತೆಯಿಲ್ಲ.
ಎಲಾ, ಹನುಮಂತ ದೇವರು ಹಿಡೀತು ಎಂಬವನೇ ನೀ ಕೇಳು:
ಹಿಂದಕ್ಕೆ ಹನುಮಂತದೇವರು ಸಂಜೀವನಕ್ಕೆ ಪೋಗಿ
ಅರ್ಧಬೆಟ್ಟವನ್ನು ಕಿತ್ತುಕೊಂಡು ಬಂದಿರ್ದ.
ಅಂಥ ಹನುಮಂತದೇವರು ನಿನ್ನ ದೇಹದಲ್ಲಿ ಇದ್ದ ಬಳಿಕ
ಈಗ ಹನ್ನೆರಡು ಮಣವು ಕಲ್ಲನಾದರು
ಎತ್ತಿ ನೆತ್ತಿಮೇಲೆ ಇಟ್ಟುಕೊಂಡರೆ ದೇವರೆನಬಹುದು!
ಎಲಾ, ವೀರಭದ್ರದೇವರು ಹಿಡೀತು ಎಂಬುವನೇ ನೀ ಕೇಳು:
ಹಿಂದಕ್ಕೆ ವೀರಭದ್ರದೇವರು ಮುನ್ನೂರು ಮೂರು ಕೋಟಿ
ರಾಕ್ಷಸರನ್ನು ಸಂಹರಿಸಿದ.
ಅಂತಪ್ಪ ವೀರಭದ್ರದೇವರು ನಿನ್ನ ದೇಹದಲ್ಲಿ ಇದ್ದ ಬಳಿಕ
ಕತ್ತಿ ಕಿತ್ತುಕೊಂಡು ಒಬ್ಬ ಇಬ್ಬರನಾದಡೆ
ಸಂಹರಿಸಿದಡೆ ದೇವರೆನಬಹುದು!
ಇದಂ ಬಿಟ್ಟು, ನೀನು ದೇವರುಹಿಡೀತು ಎಂದು ಕೂಗುವಾಗ,
ಗಟ್ಟಿಯುಳ್ಳವ ಬಂದು ತೆಕ್ಕೆಯೊಳಗೆ ಪಿಡಿದರೆ,
ತೆಕ್ಕೆಯೊಳಗೆ ಸೇರಿಕೊಂ[ಬೆಯ]ಲ್ಲದೆ
ತೆಕ್ಕೆ ಬಿಡಿಸಿಕೊಂ[ಬ]ಸಾಮರ್ಥ್ಯ ನಿನಗಿಲ್ಲಾ !
ನಿಮಗೆ ಹಿಡಿವುದು ಪಿಶಾಚಿ, ಪಿಶಾಚಿ ವಡವದೇ(?) ಪಾದರಕ್ಷೆ
ಇಂಥಾ ದೇವರ ಮಹಾತ್ಮೆಯಂ ತಿಳಿದು,
[ತ]ಮ್ಮ ಸುಜ್ಞಾನವಂ, ಮರೆದು,
'ಇವರೇ ದೇವರೆ'ಂದು ಅಡ್ಡಬೀಳುವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ
ಕೂಡಲಾದಿ ಚನ್ನಸಂಗಮದೇವಾ.