Index   ವಚನ - 15    Search  
 
ಅಯ್ಯಾ, ಜೀವಾತ್ಮ ಭೇದವಾದಮಂ ಪೇಳ್ವೆನಯ್ಯಾ: ಜೀವ ಬೇರೆ, ಆತ್ಮ ಬೇರೆ ಎಂದು ಹೇಳುವ[ವು] ಹಲವು ಶಾಸ್ತ್ರ; ಜೀವಾತ್ಮ ಐಕ್ಯ ಹೇ[ಳುವವು] ಹಲವು ಶಾಸ್ತ್ರ. ಅ[ದು] ಎಂತೆಂದಡೆ: ಸರ್ವ ಚೇತನದಲ್ಲಿಯು ಉಂಟು ಎಂದು ಹೇಳುವವು ಜೀವವು, ಶಿವಶಾಸ್ತ್ರ ಇದಕ್ಕೆ ಸಾಕ್ಷಿ: "ಅಣೋರಣೀಯಾ[ನ್] ಮಹತೋ ಮಹೀಯಾ[ನ್]" ಎಂದು ಶ್ರುತಿಯುಂಟಾಗಿ, ಇದಂ ತಿಳಿದು, ಭೇದವಾದಿಗಳು ಸರ್ವಜೀವರಲ್ಲಿಯು ಆತ್ಮವುಂಟಾದಡೆಯು ಪಶುಜೀವಜಂತುಗಳಿಗೆ ನಮಸ್ಕಾರವ ಮಾಡಬಾರದೆ ? ಎಂದು ಹೇಳುವ ಮಾಯಾವಾದಿಗಳು ನೀವು ಕೇಳಿ; ಅದು ಎಂತೆಂದಡೆ: ಎಲಾ ಎಲಾ, ಉಚ್ಫಿಷ್ಟದಲ್ಲಿಯು ಅರ್ಕನ ಪ್ರಭೆ ಬಿದ್ದು ರಸ ಬತ್ತುವದು. ಅದರ ರಸಾಸ್ವಾದವು ಅರ್ಕಂಗೆ ಮುಟ್ಟುವುದೆ? ಎಲಾ ಎಲಾ, ಸಿಲಹದಲ್ಲಿಯು ಸೂರ್ಯಪ್ರಭೆಯುಂಟು. ಅಲ್ಲಿ ವಹ್ನಿಯು ಪುಟ್ಟುವುದೆ? ಇದರಂತೆ, ಸರ್ವ ಜೀವಜಂತುಗಳಲ್ಲಿ ಮಾಯಾವಾದಿಗಳಲ್ಲಿ ಆತ್ಮಪರೀಕ್ಷೆಯಿಲ್ಲದವರಲ್ಲಿ [ದು]ಷ್ಟ ದುರ್ಜನರಲ್ಲಿ ಶಿವಭಕ್ತರಾಗಿ ಲಿಂಗವ ಧರಿಸಿ ದೇವರಾದರು ಸರಿಯೆ, [ಬ್ರಾ]ಹ್ಮರಾಗಿ ಯಜ್ಞೋಪವೀತವ ಹಾಕಿಕೊಂಡಿದ್ದರು ಸರಿಯೆ, ಯತಿಗಳಾಗಿ ಮಂಡೆ ಬೋಳಿಸಿಕೊಂಡಿದ್ದರು ಸರಿಯೆ, ಮಾರ್ಗ ತಪ್ಪಿ ನಡೆವ ಜೀವಜಂತುಗಳಲ್ಲಿ ಸಿಲಹ ಉಚ್ಫಿಷ್ಟದ ಮೇಲೆ ಸೂರ್ಯನ ಪ್ರಭೆ ಬಿದ್ದಂತೆ ಆತ್ಮ ಇದ್ದ ಕಾರಣ ಇವರಿಗೆ ಕೈಮುಗಿಯಲಾಗದು ಕಾಣಿರಯ್ಯಾ! ಇ[ವ]ರೊಳಗೆ ಶಿವಯೋಗಿಗಳು ದಾರೆಂದು ಕೇಳುವ ಮಾಯಾವಾದಿ ಕೇಳಲಾ. ಅದು ಎಂತೆಂದಡೆ: ಸೂರ್ಯನ ಪ್ರಕಾಶಕ್ಕೆ ಬಿಲದ್ವಾರವ ಸಿಲಹಂ ಪಿಡಿಯೆ ಅರ್ಕನ ಪ್ರಕಾಶಕ್ಕೆ ವಹ್ನಿ ಪುಟ್ಟೆ ಸರ್ವಕಾಷ್ಠವನು ಸುಡುವದು ಕಾಣೆಲಾ. ಶಿವಾತ್ಮ ಐಕ್ಯವ ಮಾಡಿದಾ ಶಿವಯೋಗಿಗಳಲ್ಲಿ ಸರ್ವಕರ್ಮೇಂದ್ರಿಯ ಈ ತೆರದಲ್ಲಿ ಸುಟ್ಟ ಕಾರಣ ನಿರ್ಮಳಕಾಯರಾದರು. ಇಂತಪ್ಪ ಜೀವಾತ್ಮವ ಐಕ್ಯವ ಮಾಡಿದ ಶಿವಯೋಗಿಗಳಲ್ಲಿ ನಮಸ್ಕರಿಸಬಹುದು. ಇಂತಾ ಜೀವಾತ್ಮ ವೇದವ ತಿಳಿಯದೆ 'ನಾ ಬ್ರಾಹ್ಮಣ' 'ನಾ ಶಿವಭಕ್ತ'ನೆಂದು ಹೇಳಿಕೊಂಡು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ