ಲಿಂಗಾಂಗಿಯೆಂದು ಪೇಳುವ[ವ]ನೇ ನೀ ಕೇಳು:
ಬರಿದೆ ಲಿಂಗಮಂ ಕಟ್ಟಿ, ಅಂಗದಲ್ಲಿ ಧರಿಸಿ,
ಮಂಗದೈವಂಗಳಿಗೆ ಅಡ್ಡ ಬಿದ್ದ ಬಳಿಕ
ನಿನಗೆ ಲಿಂಗಾಂಗದೇಹವೆಲ್ಲೈತೆಲಾ?
ಲಿಂಗಾಂಗದೇಹದ ಲಕ್ಷಣವ ಪೇಳುವೆನು ಕೇಳೆಲಾ:
ಲಿಂಗಾಂಗದೇಹಿಯಾದ ಬಳಿಕ,
ಲಿಂಗ ಪೋದಡೆ ಅಂಗ ಬಹಿಷ್ಠೆ;
ಅದರಿಂದ ಪೋಗಬೇಕು.
ಎಲ್ಲಾ ದೇವರಿಗೊಲ್ಲಭನಾದ ದೇವರು ಲಿಂಗವು.
ಅಂತಪ್ಪ ಲಿಂಗವು ನಿನ್ನ ಕರಸ್ಥಲ[ಕೆ] ಉರಸ್ಥಲಕೆ ಬಂದ ಬಳಿಕ
ಪರದೈವದ ಹಂಗೇಕಲಾ?
ಮನೆಯಲ್ಲಿ ಪರುಷವ ಇಟ್ಟುಕೊಂಡು
ಹೆರರ ಪದಾರ್ಥಕ್ಕೆ ಹಲ್ಲು ತೆರೆವನಂದದಿ
ಗುರುವು ಕೊಟ್ಟ ಲಿಂಗವು ಅಂಗದಲ್ಲಿ ಇದ್ದ ಬಳಿಕ
ಗುರುಮಂತ್ರವು ಶ್ರವಣದಲ್ಲಿ ಉಪದೇಶವಾದ ಬಳಿಕ,
ಗುರುವಾಕ್ಯ ಜಿಹ್ವೆಯಲ್ಲಿ ಉದ್ಭವಿಸಿದ ಬಳಿಕ,
ಗುರುಪ್ರಣುತವು ಪಣೆಗೆ ಲಿಪ್ತವಾದ ಬಳಿಕ,
ಇದಂ ಮರೆದು ಮಾಯಾ ಮೋಹಕೊಳಗಾಗಿ,
ಅನಂತ ಪ್ರಪಂಚದೊಳು ತೇಲಾಡಿ,
ತನಗೆ ವಿಪತ್ತು ಬಂದಡೆ ಕೋಟಿ
ಶೀಲವಂ ಕೇಳುವ ಹೇಳುವ
ತಾಟಕ ಹೊಲೆಯರ ಮುಖವ
ನೋಡಲಾಗದು ಕಾಣಾ
ಕೂಡಲಾದಿ ಚನ್ನಸಂಗಮದೇವಾ