Index   ವಚನ - 18    Search  
 
ಈರೇಳು ಭವನ ಹದಿನಾಲ್ಕು ಲೋಕಕ್ಕೆ ಶ್ರೀ ಮಹಾ ಸಾಂಬಶಿವನೇ ಘನವೆಂದು ನಾಲ್ಕು ವೇದಗಳು ಸಾರುತಿರ್ದವು. ಅಂತಪ್ಪ ಸಾಂಬಶಿವನು ತನ್ನ ಭಕ್ತನ ಏನೆನುತಿರ್ದನಯ್ಯಾ? 'ಭಕ್ತಂ ಮಹೇಶಗಿನ್ನಧಿಕ', 'ನನಗಿಂತಾ ನನ್ನ ಭಕ್ತನೇ ದೊಡ್ಡವನೆ'ಂದು ಸಾಂಬಶಿವನು ಹೇಳುತ್ತಿಹನು. 'ಭಕ್ತಂ ಮಹೇಶಗಿನ್ನಧಿಕ'ವೆಂಬ ನಾಮಾಂಕಿತ ಎಂತಪ್ಪ ಭಕ್ತಂಗೆ ಸಲುವದೆಂದರೆ: ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಇಂತೀ ಆರು ಗುಣಂಗಳಳಿದು, ಅಷ್ಟಮದಂಗಳ ತುಳಿದು, ತ್ರಿವಿಧ ಪದಾರ್ಥವನ್ನು ತ್ರೈಮೂರ್ತಿಗಳಿಗೆ ಕೊಟ್ಟು, ಇಷ್ಟಲಿಂಗನಿಷ್ಠಾಪರರಾಗಿ, ಜಂಗಮವೇ ಮತ್ಪ್ರಾಣವೆಂದು ನಂಬಿ, ಪೂಜಿಸುವ ಸದ್ಭಕ್ತಂಗೆ 'ಭಕ್ತಂ ಮಹೇಶಗಿನ್ನಧಿಕ'ವೆಂಬ ನಾಮಾಂಕಿತ ಸಲುವದು. ಬರಿದೆ ಡಂಬಾಚಾರಕ್ಕೆ ಪ್ರಾತಃಕಾಲಕ್ಕೆ ಎದ್ದು, ಮೇಕೆ ಹೋತಿನ ಬಂಧುಗಳಾಗಿ ಆಡಿನ ಬೀಗಪ್ಪಗಳಾಗಿ ಪತ್ರೆಗಿಡಕೆ ಹಿಡಿಯ ತೊಪ್ಪಲನ ತೆರಕೊಂಡು ಬಂದು ಲಿಂಗದ ಮಸ್ತಕದ ಮೇಲೆ ಇಟ್ಟು, ಮಧ್ಯಾಹ್ನ ಕಾಲದಲ್ಲಿ ಒಂದು ಶಿವಜಂಗಮಮೂರ್ತಿ ಹಸಿದು ಬಂದು 'ಭಿಕ್ಷಾಂದೇಹಿ' ಎಂದರೆ 'ಅಯ್ಯ ಕೈಯಿ ಅನುವು ಆಗಿಯಿಲ್ಲ', 'ಮನೆಯಲ್ಲಿ ಹಿರಿಯರು ಇಲ್ಲ', 'ಮುಂದಲಮನೆಗೆ ದಯಮಾಡಿರಿ' ಎಂಬ ಹಂದಿಮುಂಡೇಮಕ್ಕಳಿಗೆ 'ಭಕ್ತಂ ಮಹೇಶನಿಂದಧಿಕ'ವೆಂಬ ನಾಮಾಂಕಿತ ಸಲ್ಲದೆಂದಾತನಾರು?- ನಮ್ಮ ಕೂಡಲಾದಿ ಚನ್ನಸಂಗಮದೇವ.