Index   ವಚನ - 17    Search  
 
ಅಯ್ಯಾ, `ಬ್ರಹ್ಮಲಿಖಿತವೇ ದೊಡ್ಡಿತ್ತು' ಎಂದು ಪೇಳುವಿರಿ, 'ಬ್ರಹ್ಮಲಿಖಿತಕ್ಕೆ [ಇದಿರು] ಯಾರಾರು ಇಲ್ಲ' ವೆಂದು ಹೇಳುವಿರಿ, ನೀವು ಕೇಳಿರಯ್ಯಾ: ಇಂಥ ಬ್ರಹ್ಮಲಿಖಿತವ ಗೆದ್ದವರು ನಮ್ಮ ಶಿವಗಣಾಧೀಶ್ವರರಲ್ಲದೆ ಮಿಕ್ಕಿನವರು ಗೆದ್ದದ್ದು ಇಲ್ಲಾ ಕಾಣಿರಯ್ಯಾ! ಅದು ಎಂತೆಂದಡೆ: ಎಲೆ, ಬ್ರಹ್ಮನು ಶಿವನಂ ಕಾಣಲರಿಯದೆ ತತ್ತ್ವಸಾರವ ತಿಳಿಯಲರಿಯದೆ ಶಿರವ ಭೇದಿಸಿಕೊಂಡ. ಇಂಥ ಬ್ರಹ್ಮಮುಖವಾದ ವೇದಗಳು ರಥಕ್ಕೆ ವಾಜಿಯಾಗಿ ಹೋದವು. ಇಂಥಾತ್ಮನು ತತ್ತ್ವಸಾರವ ತಿಳಿಯದೆ, ಅರಿಯದೆ, ನಿಜವಸ್ತುವಾದ ಲಿಂಗಮಂ ಮರೆದು, ಶಿರವ ಭೇದಿಸಿಕೊಂಡ. ಅವ ನಮ್ಮ ಪ್ರಮಥ ಗಣಾಧೀಶ್ವರರಿಗೆ ಅದೃಷ್ಟವ ಬರೆವುದಕ್ಕೆ ಕಾರಣಕರ್ತನೆ? ಅಥವಾ ಆ ಕ್ಷಣ ಮಾತ್ರದಲ್ಲಿ ಪುತ್ರಜನನವಾದ ಕಾಲದಲ್ಲಿಯು ಬ್ರಹ್ಮನ ಬರ [ಹ ಹೋ]ಹಾಗಾಗಲಿಯೆಂದು, ಮಹಾಗುರುವು ಬಂದು ತ್ರಿಪುಂಡ್ರವಾದ ಮೂರು ಬೆರಳಿಂದ ಬ್ರಹ್ಮಲಿಖಿತವಂ ದಟ್ಟಿಸಿ ಪಣೆಗಿಟ್ಟು, ಮಾಂಸಪಿಂಡವಂ ಪೋಗಿ[ಸಿ] ಮಂತ್ರಪಿಂಡವ ಮಾಡುವರಲ್ಲದೆ ಮಿಕ್ಕವರಿಂದಾಗದು ಕಾಣಿರಯ್ಯಾ. ಆ ಪ್ರಮಥ ಗಣಾಧೀಶ್ವರರು ನಡೆದರೆಂದು ಈಗ ಮನುಜರು 'ನಾನೂ ನಡೆದೇನು' 'ನೀನೂ ನಡೆದೇನು' ಎಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ