Index   ವಚನ - 59    Search  
 
ತಾ ಗುರುವಾಹಾಗ ತನ್ನ ಗುರುವ ತಾನರಿತು, ತನಗೆ ಇಹದಲ್ಲಿ ಸುಖ, ತನ್ನ ಗುರುವಿಂಗೆ ಪರದಲ್ಲಿ ಪರಿಣಾಮವನೈದಿಸುವ ಉಭಯ ಗುರು ತಾನಾಗಿ ಇದಿರಿಂಗೆ ಪ್ರತಿಸ್ವರೂಪವ ಕೊಡುವಲ್ಲಿ, ತನ್ನಯ ನಿಜರೂಪ ಪ್ರಾಣಪ್ರತಿಷ್ಠೆಯ ಮಾಡಿ ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡುವಲ್ಲಿ, ಕಾಯದ ಸೂತಕವ ಕಳೆದು, ಮನದ ವಿಕಾರವ ಹಿಂಗಿಸಿ, ತನ್ನಿರವನರಿತು ಅರಿದರಿವ ಶಿಷ್ಯನ ಹೃತ್ಕಮಲ ಮಧ್ಯದಲ್ಲಿ ನೆಲೆಗೊಳಿಸಿ, ಅರಿವಿನ ಭೇದದಿಂದ ಶಿಲೆಯ ಸೂತಕವ ಕಳೆದು ಇಷ್ಟಪ್ರಾಣವ ಬೆಸುವ ಬೆಸುಗೆಯ ತೋರಿ, ಉಡುವ ತೊಡುವ, ಕೊಡುವ ಕೊಂಬ, ಮುಟ್ಟುವ ಅರ್ಪಿತಭೇದವ ದೃಷ್ಟದಿಂದ ತೋರಿ, ಗುರುವೆಂಬ ಭಾವ ತನಗೆ ತಲೆದೋರದೆ ಹರಶರಣರ ಮುಂದಿಟ್ಟು ನಿನ್ನಯ ಪರಿದೋಷವ ಪರಿಹರಿಸಿಕೊ ಎಂದು ತ್ರಿವಿಧದ ಭೇದವ ತೋರಿ, ತಾನು ಶುಕ್ತಿ ನುಂಗಿದ ಜಲದಂತೆ, ಭ್ರಮರ ನುಂಗಿದ ಗಂಧದಂತೆ, ದ್ಯುತಿಕೊಂಡ ದ್ಯುಮಣಿಯಂತೆ, ನಾಮ ರೂಪು ಭಾವವಳಿದು ತಾನು ತಾನಾದಡೆ ಗುರುಸ್ಥಲ. ಅದ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.