Index   ವಚನ - 5    Search  
 
ಗುರುವಿಂಗೆ ಗುರುವಾಗಿ ಎನಗೆ ಗುರುವಾದನಯ್ಯಾ ಬಸವಣ್ಣನು. ಲಿಂಗಕ್ಕೆ ಲಿಂಗವಾಗಿ ಎನಗೆ ಲಿಂಗವಾದನಯ್ಯಾ ಚೆನ್ನಬಸವಣ್ಣನು. ಜಂಗಮಕ್ಕೆ ಜಂಗಮವಾಗಿ ಎನಗೆ ಜಂಗಮವಾದನಯ್ಯಾ ಪ್ರಭುದೇವರು. ಪ್ರಸಾದಕ್ಕೆ ಪ್ರಸಾದವಾಗಿ ಎನಗೆ ಪ್ರಸಾದವಾದನಯ್ಯಾ ಮರುಳಶಂಕರದೇವರು. ಬಸವಣ್ಣನಿಂದ ಶುದ್ಧಪ್ರಸಾದಿಯಾದೆನು. ಚೆನ್ನಬಸವಣ್ಣನಿಂದ ಸಿದ್ಧಪ್ರಸಾದಿಯಾದೆನು. ಪ್ರಭುದೇವರಿಂದ ಪ್ರಸಿದ್ಧಪ್ರಸಾದಿಯಾದೆನು. ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು. ಇಂತೀ ಚತುರ್ವಿಧವೆನ್ನ ಸರ್ವಾಂಗದಲ್ಲಿ ಕರಿಗೊಂಡು ಎಡದೆರಹಿಲ್ಲದೆ ಪರಿಪೂರ್ಣವಾಯಿತ್ತು. ಮಸಣಯ್ಯಪ್ರಿಯ ಗಜೇಶ್ವರಾ, ನಿಮ್ಮ ಶರಣರ ಪಾದಕ್ಕೆ ನಮೋ ನಮೋ ಎನುತಿರ್ದೆನು.