Index   ವಚನ - 2    Search  
 
ಪಾದಪೂಜೆಯ ಮಾಡಿ ಪಾದತೀರ್ಥವ ಪಡೆದುಕೊಂಬ ಕ್ರಮವು ಎಂತೆಂದಡೆ : 'ದೇಶಿಕಸ್ಯ ಪದಾಂಗುಷ್ಠೇ ಲಿಖಿತಾ ಪ್ರಣವಂ ತತಃ | ಪಾದಪೂಜಾವಿಧಿಂ ಕೃತ್ವಾ ವಿಶೇಷಂ ಶೃಣು ಪಾರ್ವತಿ ||' ಎಂದುದಾಗಿ, ಭಯಭಕ್ತಿ ಕಿಂಕುರ್ವಾಣದಿಂದೆ ಜಂಗಮಕ್ಕೆ ಪಾದಾರ್ಚನೆಯಂ ಮಾಡಿ ಗದ್ದುಗೆಯನಿಕ್ಕಿ ಮೂರ್ತವ ಮಾಡಿಸಿ ತನ್ನ ಕರಕಮಲವಂ ಮುಗಿದು ಅಯ್ಯಾ, ಹಸಾದ ಮಹಾಪ್ರಸಾದ ಪೂರ್ವಜನ್ಮ ನಿವಾರಣಂ ದೀಕ್ಷಾಗುರು ಶಿಕ್ಷಾಗುರು ಮೋಕ್ಷಗುರು ಗುರುವಿನಗುರು ಪರಮಗುರು ಪರಮಾರಾಧ್ಯ ಶ್ರೀಪಾದಗಳಿಗೆ ಶರಣು ಶರಣಾರ್ಥಿಯೆಂದು 'ಪ್ರಣಮ್ಯ ದಂಡವದ್ಭೂಮೌ ಇಷ್ಟಮಂತ್ರಂ [ಸದಾಜಪೇತ್] ಶ್ರೀ ಗುರೋಃ ಪಾದಪದ್ಮಂ ಚ ಗಂಧಪುಷ್ಪಾಕ್ಷತಾದಿಭಿಃ ||' ಎಂದುದಾಗಿ, ದೀರ್ಘದಂಡ ನಮಸ್ಕಾರವಂ ಮಾಡಿ ಪಾದಪೂಜೆಗೆ ಅಪ್ಪಣೆಯಂ ತಕ್ಕೊಂಡು ಮೂರ್ತವಂ ಮಾಡಿ ಲಿಂಗವ ನಿರೀಕ್ಷಿಸಿ ತನ್ನ ಅಂಗೈಯಲ್ಲಿ ಓಂಕಾರ ಪ್ರಣವಮಂ ವಿಭೂತಿಯಲ್ಲಿ ಬರೆದು ಆ ಜಂಗಮದ ಎರಡು ಪಾದಗಳ ತನ್ನ ಕರಕಮಲದಲ್ಲಿ ಲಿಂಗೋಪಾದಿಯಲ್ಲಿ ಪಿಡಿದುಕೊಂಡು ಎರಡು ಅಂಗುಷ್ಠಗಳಲ್ಲಿ ಪ್ರಣವಮಂ ಬರೆದು, ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ ನಮಸ್ಕರಿಸಿ, ಆ ಪೂಜೆಯಂ ಇಳುಹಿ ಬಟ್ಟಲೊಳಗೆ ಪ್ರಣವಮಂ ಬರೆದು ಬ್ರಹ್ಮರಂಧ್ರದಲ್ಲಿರ್ದ ಸತ್ಯೋದಕವೆಂದು ಭಾವಿಸಿ, ಆ ಉದಕದ ಬಲದಂಗುಷ್ಠದ ಮೇಲೆ ನೀಡುವಾಗ ಆಱುವೇಳೆ ಷಡಕ್ಷರವ ನುಡಿದು ಇಷ್ಟಲಿಂಗವೆಂದು ಭಾವಿಸಿ, ಎಡದಂಗುಷ್ಠದ ಮೇಲೆ ನೀಡುವಾಗ ಐದುವೇಳೆ ಪಂಚಾಕ್ಷರವ ನುಡಿದು ಪ್ರಾಣಲಿಂಗವೆಂದು ಭಾವಿಸಿ, ಎರಡಂಗುಷ್ಠದ ಮಧ್ಯದಲ್ಲಿ ಉದಕವ ನೀಡುವಾಗ ಒಂದು ವೇಳೆ 'ಓಂ ಬಸವಲಿಂಗಾಯನಮಃ' ಎಂದು ಸ್ಮರಿಸಿ, ಭಾವಲಿಂಗವೆಂದು ಭಾವಿಸಿ ದ್ರವನೆಲ್ಲವ ತೆಗೆದು ಮತ್ತೆ ಪೂಜೆಯ ಮಾಡಿ ನಮಸ್ಕರಿಸಿ ಶರಣಾರ್ಥಿಯೆಂದು ಆ ಜಂಗಮವು ಸಲ್ಲಿಸಿದ ಮೇಲೆ ತಾನು ಪಾದತೀರ್ಥವ ಸಲ್ಲಿಸುವುದು. ಪಂಚಾಂಗುಲಿ ಪಂಚಾಕ್ಷರಿಯಿಂದಲಿ ಲಿಂಗಕರ್ಪಿಸಿ ಆ ಪಂಚಾಂಗುಲಿಯುತ ಜಿಹ್ವೆಯಿಂದ ಸ್ವೀಕರಿಸುವುದು ಗುರುಪಾದೋದಕ. ಲಿಂಗವನೆತ್ತಿ ಅಂಗೈಯಲ್ಲಿರ್ದ ತೀರ್ಥವ ಸಲ್ಲಿಸಿದುದು ಲಿಂಗಪಾದೋದಕ. ಬಟ್ಟಲೊಳಗಿರ್ದ ತೀರ್ಥವ ಸಲಿಸಿದುದು ಜಂಗಮಪಾದೋದಕ. ಈ ತ್ರಿವಿಧ ಪಾದೋದಕ ಒಂದೇ ಎಂದರಿವುದು. ಹೀಗೆ ಕ್ರಮವರಿದು ಸಲಿಸುವರ್ಗೆ ಮುಕ್ತಿಯಾಗುವುದಕ್ಕೆ ತಡವಿಲ್ಲವೆಂದಾತ ನಮ್ಮ ಶಾಂತಕೂಡಲಸಂಗಮದೇವ