Index   ವಚನ - 9    Search  
 
ಶಿವನು ಗುರುಭಕ್ತರ ಮನವ ನೋಡುವುದಕ್ಕೆ ಕಂಟಕವನೊಡ್ಡುವನು, ಅಪರಾಧಗೊಡುವನು, ಭಾಗ್ಯವೆಲ್ಲ ಬಯಲುಮಾಡುವನು. ಬಂಧುಗಳೆಲ್ಲರ ವೈರಿಗಳ ಮಾಡುವನು, ದೇಶತ್ಯಾಗವ ಮಾಡಿಸುವನು, ಭಯಭೀತಿಯನೊಡ್ಡುವನು, ಮನಕ್ಕೆ ಅಧೈರ್ಯವ ತೋರುವನು. ಸಾಕ್ಷಿ: "ಪುಣ್ಯಮೇಕೋ ಮಹಾಬಂಧುಃ ಪಾಪಮೇಕೋ ಮಹಾರಿಪುಃ | ಅಸಂತೋಷೋ ಮಹಾವ್ಯಾಧಿಃ ಧೈರ್ಯಂ ಸರ್ವತ್ರಸಾಧನಂ ||'' ಎಂದುದಾಗಿ, ''ಅಪರಾಧೋರ್ಥನಾಶಂ ಚ ವಿರೋಧೋ ಬಾಂಧವೇಷು ಚ | ದೇಶತ್ಯಾಗೋ ಮಹಾವ್ಯಾಧಿಃ ಮದ್ಭಕ್ತಸ್ಯ ಸುಲಕ್ಷಣಂ ||'' ಇಂತೀ ದುಃಖವೆಲ್ಲವು ಶಿವನ ಅನುಜ್ಞೆಯಿಂದ ಬಂದವೆಂದು ತಿಳಿದು, ಗುರುಲಿಂಗಜಂಗಮಕ್ಕೆ ಬಲಗೊಂಡು ನೀವೇ ಗತಿಯೆಂದು ನೀವೇ ಮತಿಯೆಂದು, ನೀವು ಹಾಲಲದ್ದಿರಿ ನೀರಲದ್ದಿರಿ ಎಂಬ ಭಾವದಲ್ಲಿದ್ದಡೆ ಅವರ ಶಿವನು ತನ್ನ ಗರ್ಭದಲ್ಲಿ ಇಂಬಿಟ್ಟುಕೊಂಬನು. ನಮ್ಮ ಶಾಂತಕೂಡಲಸಂಗಮದೇವ ತನ್ನ ನಂಬಿದವರ ಹೃದಯದಲ್ಲಿಪ್ಪನು.