ನಮ್ಮ ಗಣಂಗಳ ಸಹವಾಸದಿಂದೆ
ಏನೇನು ಫಲಪದವಿಯಾಯಿತ್ತೆಂದಡೆ,
ಅಷ್ಟಾವರಣಂಗಳು ಸಾಧ್ಯವಾದವು.
ಸಾಧ್ಯವಾದ ಕಾರಣ,
ಶ್ರೀಗುರುವು ಎನ್ನ ಕರಸ್ಥಲಕ್ಕೆ ಲಿಂಗವ ಕೊಟ್ಟ,
ಎಂದೆಂದಿಗೂ ಸತಿ-ಪತಿ ಭಾವ ತಪ್ಪಬೇಡವೆಂದು
ಗಣಂಗಳ ಸಾಕ್ಷಿಯ ಮಾಡಿ,
ನೀನು ಅಂಗವಾಗಿ ಲಿಂಗವೇ ಪ್ರಾಣವಾಗಿರಿಯೆಂದು
ಇಬ್ಬರಿಗೂ ಆಜ್ಞೆಯ ಮಾಡಿದ ಕಾರಣ
ಎನ್ನಂಗವೇ ನಿನ್ನಂಗ, ಎನ್ನ ಪ್ರಾಣವೇ ನಿನ್ನ ಪ್ರಾಣ.
ನಿನ್ನ ಪ್ರಾಣವೇ ಎನ್ನ ಪ್ರಾಣವಾದ ಮೇಲೆ
ಎನ್ನ ಮಾನಾಪಮಾನ ನಿಮ್ಮದಯ್ಯಾ,
ಎನ್ನ ಹಾನಿ ವೃದ್ಧಿ ನಿಮ್ಮದಯ್ಯಾ.
ನೀವು ಈರೇಳು ಲೋಕದ ಒಡೆಯರೆಂಬುದ
ನಾನು ಬಲ್ಲೆನಯ್ಯಾ.
ಬಲ್ಲೆನಾಗಿ, ಪುರುಷರ ದೊರೆತನ ಹೆಂಡರಿಗಲ್ಲದೆ ಬೇರುಂಟೆ?
ಎನ್ನ ಸುಖದುಃಖವೆ ನಿನ್ನದಯ್ಯ,
ನಿನ್ನ ಸುಖದುಃಖವೆ ಎನ್ನದಯ್ಯ,
ಅದಕ್ಕೆ ಎನ್ನ ತನುಮನಧನವ ಸೂಸಲೀಯದೆ
ನಿಮ್ಮೊಡವೆ ನೀವು ಜೋಕೆಯ ಮಾಡಿಕೊಳ್ಳಿರಿ.
ಜೋಕೆಯ ಮಾಡದಿದ್ದಡೆ ಗಣಂಗಳಿಗೆ ಹೇಳುವೆ,
ಏಕೆಂದರೆ ಗಣಂಗಳು ಸಾಕ್ಷಿಯಾಗಿದ್ದ ಕಾರಣ.
ಆಗ ಆ[ಣೆ]ಯ ಮಾತು ಹೇಳಬಹುದೆಯೆಂದಡೆ
ಆಗ ಎನಗೆ ಪ್ರತ್ಯುತ್ತರವಿಲ್ಲ ಸ್ವಾಮಿ.
ನಿಮ್ಮ ಒಡವೆ ನಿಮಗೆ ಒಪ್ಪಿಸುವೆನೆಂದರುಹಿದನು
ನಮ್ಮ ಶಾಂತಕೂಡಲಸಂಗಮದೇವ