Index   ವಚನ - 15    Search  
 
ಲಿಂಗವ ಪೂಜಿಸಿ ಅಂಗವ ಬೇಡಬಾರದಯ್ಯಾ. ಅದೇಕೆಂದಡೆ ಶಿವನು ದೀನನು. ಅದು ಹೇಗೆಂದಡೆ: ದ್ರವ್ಯವೆಲ್ಲವು ಕುಬೇರನ ವಾಸಮಾಡಿ ದೀನವಾಯಿತು. ಹದಿನಾಲ್ಕು ಲೋಕಗೋಸ್ಕರವಾಗಿ ಆ ದ್ರವ್ಯವಿದ್ದು, ಹದಿನಾಲ್ಕು ಲೋಕಕ್ಕೆ ಹೇಗೆ ಮಾಡಲಿ ಎಂದು ಚಿಂತಿಸಿ ಒಂದು ಕೌಪವ ತಂದು ನಮ್ಮ ಗಣಂಗಳ ಮನೆಯಲಿಟ್ಟು ಮಾಯವಾಗಿ, ನ್ಯಾಯಕಿಕ್ಕಿ, ಅಮರನೀತಿಗಳ ಮನೆಯ ಭಂಡಾರವೆಲ್ಲವ ಅವರು ಸಹಜವಾಗಿ ಒಯ್ದರು. ಅದು ಸಾಲದೆ, ನಮ್ಮ ಗಜಪತಿರಾಯನ ಮನೆಯ ಕನ್ನವನಿಕ್ಕಿ ಒಯ್ದು, ಈರೇಳು ಲೋಕವನೆ ಪ್ರತಿಪಾಲನೆಯ ಮಾಡಿ, ಅವರೆಲ್ಲ ಉಂಡ ಮೇಲೆ ನೀವು ಉಂಬಿರಿ. ದಿನದಿನಕ್ಕೆ ಇದೇ ಚಿಂತೆ ನಿಮಗೆ. ನಮ್ಮ ಗಣಂಗಳು ನಿಶ್ಚಿಂತೆಯಲ್ಲಿಪ್ಪರು. ಅದು ಹೇಗೆಂದಡೆ: ದಿನದಿನದ ಈ ಕಾಯಕವ ದಿನದಿನಕೆ ಸರಿಮಾಡಿ ಇಂದಿನ ಕಾಸು ಉದಯಕ್ಕೆ ತಂಗಳೆಂಬರು. ನಾಳಿನ ಚಿಂತೆ ನನಗೇಕೆಂಬರು. ನೀವು ನಾಳಿಗೆ ಬೇಕೆಂದು ಇಟ್ಟುಕೊಂಡು, ನಮ್ಮ ಕರಿಕಾಲಚೋಳನ ಮನೆಯಲ್ಲಿ ಅಡಿಗೆಯ ಮಾಡಿಸಿ ಉಂಡು, ಅದು ಸಾಲದೆ ? ನಮ್ಮ ಮಾದಾರ ಚೆನ್ನಯ್ಯನ ಮನೆಯಲ್ಲಿ ಅಂಬಲಿಯನುಂಡಿರಿ, ಆಗ ಈರೇಳು ಲೋಕಕ್ಕೆ ತೃಪ್ತಿಯಾಯಿತ್ತು. ಇಂತಪ್ಪ ನಮ್ಮ ಗಣಂಗಳ ಉದಾರತ್ವ ಹೇಳಲಿಕ್ಕೆ ಅಸಾಧ್ಯವು. ಇದ ನೀವು ಬಲ್ಲಿರಿಯಾಗಿ, ನಮ್ಮ ಗಣಂಗಳ ಹೃದಯದಲ್ಲಿ ಮನೆಯ ಮಾಡಿಕೊಂಡಿಪ್ಪಿರಿ ಎಂದಾತ ನಮ್ಮ ಶಾಂತಕೂಡಲಸಂಗಮದೇವ