ತ್ರೈಮೂರ್ತಿಗಳು ನಿನ್ನ ಸಾಕಾರದ ಶಾಖೆ.
ತ್ರೈಮೂರ್ತಿಗಳು ನಿನ್ನ ಅಪ್ಪುವಿನ ಅಂಕುರ ಶಕ್ತಿ.
ಇಂತೀ ಸರ್ವಗುಣ ಸಂಪನ್ನನಾಗಿ
ಬ್ರಹ್ಮಂಗೆ ಅಂಡವ ಕೊಟ್ಟು ವಿಷ್ಣುವಿಗೆ ಪಿಂಡವ ಕೊಟ್ಟು
ರುದ್ರಂಗೆ ಕಂಡೆಹವ ಕೊಟ್ಟು ಹಿಂಗಿದೆ.
ನೀನಿದರಂದವನೊಲ್ಲದೆ ಅಂಗಕ್ಕೆ ಮಯ ನೀನೇ,
ನಿರಂಗಕ್ಕೆ ಸಂಗ ನೀನೇ.
ಹಿಂಗೂದಕ್ಕೆ ನಿನ್ನಂಗ ಅನ್ಯ ಭಿನ್ನವಲ್ಲ.
ಮುಕುರದ ಮರೆಯಲ್ಲಿ ತೋರುವ ಪ್ರತಿರೂಪಿನಂತೆ
ಸಕಲದೇವರ ಚೈತನ್ಯಭಾವ ನಿನ್ನ ಉಷ್ಣ ಬಿಂದು,
ಸಕಲದೇವರ ಶಾಂತಿ ನಿನ್ನ ಸಮಾನ ಬಿಂದು,
ಇಂತಿವ ಹೇಳುವಡೆ ವಾಙ್ಮನಕ್ಕತೀತ
ಅತ್ಯತಿಷ್ಠದ್ದಶಾಂಗುಲ ನಾರಾಯಣ ನಯನ ಪೂಜಿತ
ಪ್ರಿಯ ರಾಮೇಶ್ವರಲಿಂಗ ನಾ ನೀನಾದೈಕ್ಯ.