Index   ವಚನ - 12    Search  
 
ಆಚಾರಭಕ್ತ ಹನ್ನೆರಡು ಪ್ರಕಾರವನೊಳಕೊಂಡು ಆಚಾರಲಿಂಗವಾಗಿ ಲಿಂಗದ ಪೀಠದಲ್ಲಿ ಸಂಯೋಗವಾದನಯ್ಯ ಬಸವಣ್ಣ. ಗೌರವಮಾಹೇಶ್ವರ ಹನ್ನೆರಡು ಪ್ರಕಾರವನೊಳಕೊಂಡು ಗುರುಲಿಂಗವಾಗಿ ಲಿಂಗದ ಮಧ್ಯದಲ್ಲಿ ಸಂಯೋಗವಾದನಯ್ಯ ಬಸವಣ್ಣ. ಲೈಂಗಿಪ್ರಸಾದಿ ಹನ್ನೆರಡು ಪ್ರಕಾರವನೊಳಕೊಂಡು ಶಿವಲಿಂಗವಾಗಿ ಲಿಂಗದ ವರ್ತುಳದಲ್ಲಿ ಸಂಯೋಗವಾದನಯ್ಯ ಬಸವಣ್ಣ. ಚರಪ್ರಾಣಲಿಂಗಿ ಹನ್ನೆರಡು ಪ್ರಕಾರವನೊಳಕೊಂಡು ಜಂಗಮಲಿಂಗವಾಗಿ ಲಿಂಗದ ಗೋಮುಖದಲ್ಲಿ ಸಂಯೋಗವಾದನಯ್ಯ ಬಸವಣ್ಣ. ಪ್ರಸಾದಶರಣ ಹನ್ನೆರಡು ಪ್ರಕಾರವನೊಳಕೊಂಡು ಪ್ರಸಾದಲಿಂಗವಾಗಿ ಲಿಂಗದ ನಾಳದಲ್ಲಿ ಸಂಯೋಗವಾದನಯ್ಯ ಬಸವಣ್ಣ. ಮಹಾಘನಐಕ್ಯ ಹನ್ನೆರಡು ಪ್ರಕಾರವನೊಳಕೊಂಡು ಮಹಾಲಿಂಗವಾಗಿ ಲಿಂಗದ ಗೋಳಕದಲ್ಲಿ ಸಂಯೋಗವಾದನಯ್ಯ ಬಸವಣ್ಣ. ಇಂತಪ್ಪ ಬಸವಣ್ಣನೆ ಸಚ್ಚಿದಾನಂದ ಬ್ರಹ್ಮವು. ಆ ಸಚ್ಚಿದಾನಂದ ಬ್ರಹ್ಮವೆ ತನ್ನ ಲೀಲೆದೋರಿ ಒಂದು ಎರಡು ಮೂರು ಆರು ಒಂಬತ್ತು ಹದಿನೆಂಟು ಮೂವತ್ತಾರು ನೂರೊಂದು ನೂರೆಂಟು ಇನ್ನೂರಹದಿನಾರು ಮಿಗೆ ಮಿಗೆ ತೋರುವ ಬ್ರಹ್ಮವೆ ಬಸವಣ್ಣನು. ಈ ಬಸವಣ್ಣನೆ ಎನಗೆ ಇಷ್ಟಬ್ರಹ್ಮ. ಆ ಇಷ್ಟಬ್ರಹ್ಮದಲ್ಲಿ ಷೋಡಶ ದ್ವಿಶತ ಅಷ್ಟಾಶತ ಏಕಶತ ಛತ್ತೀಸ ಅಷ್ಟಾದಶ ನವ ಇಂತಿವೆಲ್ಲವು ಆರರೊಳಗಡಗಿ ಆರು ಮೂರರೊಳಗಡಗಿ ಆ ಮೂರು ಲಿಂಗದ ಗೋಳಕ ಗೋಮುಖ ವೃತ್ತಾಕಾರದಲ್ಲಿ ಅಡಗಿದ ಭೇದವನು ಸಿದ್ಧೇಶ್ವರನು ಎನಗರುಹಿದ ಕಾರಣ ದ್ವೈತಾದ್ವೈತವೆಲ್ಲವು ಸಂಹಾರವಾಗಿ ಹೋದವು. ನಾನು ದ್ವೈತಾದ್ವೈತವ ಮೀರಿ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದದೊಳಗೆ ಸತ್ತು ಪರಂಜ್ಯೋತಿ ಮಹಾಲಿಂಗಗುರು ಸಿದ್ಧ[ಲಿಂಗ] ಪ್ರಭುವಿನಲ್ಲಿ ಕೆಟ್ಟು ಬಟ್ಟಬಯಲಾದೆನಯ್ಯ, ಬೋಳಬಸವೇಶ್ವರ ನಿಮ್ಮಧರ್ಮ ನಿಮ್ಮ ಧರ್ಮ.