Index   ವಚನ - 11    Search  
 
ಆಚಾರಭಕ್ತ ಮೂವತ್ತಾರುಭೇದವನೊಳಕೊಂಡು ನಕಾರವಾಗಿ ಲಿಂಗದ ಪೀಠದಲ್ಲಿ ಸಂಬಂಧವಾದನಯ್ಯ ಬಸವಣ್ಣ. ಗೌರವಮಾಹೇಶ್ವರ ಮೂವತ್ತಾರು ಭೇದವನೊಳಕೊಂಡು ಮಃಕಾರವಾಗಿ ಲಿಂಗದ ಮಧ್ಯದಲ್ಲಿ ಸಂಬಂಧವಾದನಯ್ಯಮಡಿವಾಳಯ್ಯ. ಲೈಂಗಿಪ್ರಸಾದಿ ಮೂವತ್ತಾರು ಭೇದವನೊಳಕೊಂಡು ಶಿಕಾರವಾಗಿ ಲಿಂಗದ ವರ್ತುಳದಲ್ಲಿ ಸಂಬಂಧವಾದನಯ್ಯ ಚೆನ್ನಬಸವಣ್ಣ. ಚರಪ್ರಾಣಲಿಂಗಿ ಮೂವತ್ತಾರು ಭೇದವನೊಳಕೊಂಡು ವಾಕಾರವಾಗಿ ಲಿಂಗದ ಗೋಮುಖದಲ್ಲಿ ಸಂಬಂಧವಾದನಯ್ಯಾ ಪ್ರಭುದೇವರು. ಪ್ರಸಾದಶರಣ ಮೂವತ್ತಾರು ಭೇದವನೊಳಕೊಂಡು ಯಕಾರವಾಗಿ ಲಿಂಗದ ನಾಳದಲ್ಲಿ ಸಂಬಂಧವಾದನಯ್ಯ ಉರಿಲಿಂಗಯ್ಯಗಳು. ಮಹಾಘನ ಐಕ್ಯ ಮೂವತ್ತಾರು ಭೇದವನೊಳಕೊಂಡು ಓಂಕಾರವಾಗಿ ಲಿಂಗದ ಗೋಳಕದಲ್ಲಿ ಸಂಬಂಧವಾದನಯ್ಯ ಅಜಗಣ್ಣ. ಇಂತಪ್ಪ ಇಷ್ಟಬ್ರಹ್ಮವೆ ಎನ್ನ ನವದ್ವಾರ ನವಚಕ್ರ ಅಂಗ ಮನ ಪ್ರಾಣ ಸರ್ವೇಂದ್ರಿಯದಲ್ಲಿ ಪ್ರಭಾವಿಸಿದ ಭೇದವನು ಸಿದ್ಧೇಶ್ವರನು ಶ್ರುತ ಗುರು ಸ್ವಾನುಭಾವದಿಂದ ಅರುಹಿದನಾಗಿ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗ ಪ್ರಭುವಿನಲ್ಲಿ ಎರಡರಿಯದೆ ಇದ್ದೆನಯ್ಯ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.