Index   ವಚನ - 17    Search  
 
ಎನ್ನ ಪಂಚಾಕ್ಷರವ ಇಷ್ಟಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಸಪ್ತದಶಾಕ್ಷರವ ಪ್ರಾಣಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ತ್ರಿವಿಧಾಕ್ಷರವ ಭಾವಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಷಡಿಂದ್ರಿಯಂಗಳ ಷಡ್ವಿಧಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ನವಚಕ್ರಂಗಳ ನವವಿಧಲಿಂಗಕ್ಷೇತ್ರ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಅನ್ನಮಯವ ಪ್ರಸಾದ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಪ್ರಾಣಮಯವ ಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಮನೋಮಯವ ಶಿವಧ್ಯಾನ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ವಿಜ್ಞಾನಮಯವ ಜ್ಞಾನ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಆನಂದಮಯವ ಶಿವಾನಂದಮಯವಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಷಡ್‍ಧಾತುಗಳ ಷಡಕ್ಷರ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಇಂತೀ ಬಸವಣ್ಣನೇ ಎನ್ನ ಅಂಗ ಮನ ಪ್ರಾಣೇಂದ್ರಿಯಂಗಳಲ್ಲಿ ಪರಿಪೂರ್ಣನಾಗಿ ಬಸವಣ್ಣನೇ ಇಷ್ಟವಾಗಿ ತೊಳಗಿ ಬೆಳಗುತ್ತಿಪ್ಪ ಭೇದವನು ಬೋಳಬಸವೇಶ್ವರನೆನಗೆ ಅರುಹಿಕೊಟ್ಟು ಸಿದ್ಧೇಶ್ವರನೆಂಬ ಚಿದಬ್ಧಿಯೊಳಗೆ ಮುಳುಗಿಸಿದ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗ ಪ್ರಭುವಿನಲ್ಲಿ ಉಭಯಭಾವವನರಿಯದೆ ಶಿವಶಿವ ಎನುತಿರ್ದೆನಯ್ಯ ನಿಮ್ಮ ಧರ್ಮ ನಿಮ್ಮ ಧರ್ಮ.