Index   ವಚನ - 2    Search  
 
ಕಿಂಕರತ್ವದಿಂದ ಬಹುಜನ್ಮದ ಪಾಪದಲತೆ ಕಡಿವುದಯ್ಯ. ಕಿಂಕರತ್ವದಿಂದ ಬಹುಜನ್ಮದ ನಿಂದ್ಯಕುಂದ್ಯಗಳು ಹರಿದು ಹೋಗುವವಯ್ಯ. ಕಿಂಕರತ್ವದಿಂದ ಬಹುಜನ್ಮದ ಭ್ರೂಣಹತ್ಯ ಮೊದಲಾಗಿ ಮಹಾದ್ರೋಹಂಗಳು ದಗ್ಧವಾಗುವವಯ್ಯ. ಕಿಂಕರತ್ವದಿಂದ ಮಹಾಪದವಾಗುವುದಯ್ಯ. ಕಿಂಕರತ್ವದಿಂದ ಮಹಾಪಾಪದಗ್ಧವಾಗುವುದಯ್ಯ. ಕಿಂಕರತ್ವದಿಂದ ಸತ್ಕಾಯಕ ದೊರವುದಯ್ಯ. ಕಿಂಕರತ್ವದಿಂದ ಸತ್ಯರ ಸಂಗದೊರವುದಯ್ಯ. ಕಿಂಕರತ್ವದಿಂದ ಬಹುರಾಜಮನ್ನಣೆಯಾಗುವುದಯ್ಯ. ಕಿಂಕರತ್ವದಿಂದ ಅಷ್ಟಾವರಣ ಪ್ರತ್ಯಕ್ಷವಾಗುವುದಯ್ಯ. ಕಿಂಕರತ್ವದಿಂದ ಪಂಚಪರುಷ ದೊರವುದಯ್ಯ. ಕಿಂಕರತ್ವದಿಂದ ನಡೆನುಡಿ ಶುದ್ಧಸಿದ್ಧವಾಗುವುದಯ್ಯ. ಕಿಂಕರತ್ವದಿಂದ ಸಮಸ್ತರು ಗಣಪದಕ್ಕೆ ಯೋಗ್ಯವಾದರು ನೋಡ. ಕಿಂಕರನೆ ಸದ್ಗುರುಶಂಕರ ನೋಡ ಸಂಗನಬಸವೇಶ್ವರ