Index   ವಚನ - 57    Search  
 
ಅಯ್ಯ, ಮರ್ತ್ಯದ ಮಧ್ಯದಲ್ಲಿ ಶ್ರೀಗುರುಕರಜಾತನಾದ ಮೇಲೆ ಹೊನ್ನು, ಹೆಣ್ಣು, ಮಣ್ಣು, ಅನ್ನ, ನೀರು, ವಸ್ತ್ರ, ಆಭರಣ, ವಾಹನ, ಪುತ್ರ, ಮಿತ್ರ, ಅನಾಚಾರ, ದುಸ್ಸಂಗವೆಂಬ ದ್ವಾದಶಮಲಂಗಳ ಬಲೆಗೆ ಸಿಲ್ಕದೆ, ಇಹಲೋಕದ ಭೋಗ, ಪರಲೋಕದ ಮೋಕ್ಷಂಗಳಿಗೆ ಇಚ್ಛೈಸದೆ, ಸಿರಿ-ಹರುಷ-ಮಿತ್ರ-ದರಿದ್ರ-ಚಿಂತೆ-ಶತ್ರುತ್ವಂಗಳ ಸಮಾನಂಗೊಂಡು ಲಿಂಗಾಣತಿಯಿಂದ ಉಪವಾಸ-ತೃಪ್ತಿಗಳು ಬಂದು ತಟ್ಟಿದಲ್ಲಿ ಸಂತೃಪ್ತನಾಗಿ, ಆಧಿ ವ್ಯಾಧಿಗಳು ಬಂದು ತಟ್ಟಿದಲ್ಲಿ ಪಾದೋದಕ -ಪ್ರಸಾದದಲ್ಲಿ ಕೂಡಿಸಿ, ಸಮಭಾಜನವ ಮಾಡಿ, ಲಿಂಗಭೋಗೋಪಭೋಗಿಯಾಗಿ, ಅವಿರಳಾನಂದದಿಂದ ಹಿಂದಣ ಪಾಪ, ಮುಂದಣ ಪುಣ್ಯಗಳಿಗೆ ಹೊರತಾಗಿ, ಅವ ತನ್ನೊಳಗೆಮಾಡಿಕೊಂಡು, ಮನದ ಬಯಕೆಯ ನೀಗಿ, ಕಾಲಹರ-ಕರ್ಮಹರ-ದುರಿತಹರ-ಪಾಪಹರ ಲೀಲೆಯಿಂದ ಮರ್ತ್ಯದಲ್ಲಿ ಇದ್ದು ಇಲ್ಲದಂತೆ ಸಚ್ಚಿದಾನಂದನಾಗಿ ಆಚರಿಸುವಂಥ ನಿಜನೈಷ್ಠೆಯೇ ನಿರ್ವಾಣದೀಕ್ಷೆ. ಇಂತುಟೆಂದು ಶ್ರೀಗುರುನಿಷ್ಕಳಂಕ ಪರಮಾನಂದಮೂರ್ತಿ ಚಿಕ್ಕದಂಡನಾಥ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರಾ.