Index   ವಚನ - 59    Search  
 
ಅಯ್ಯ, ನಿನ್ನ ಷಟ್ಚಕ್ರಂಗಳಲ್ಲಿ ಅನಾದಿ ನಿಷ್ಕಳಂಕ ಚಿದ್ಘನ ಇಷ್ಟಮಹಾಲಿಂಗವೆ ಷಡ್ವಿಧಲಿಂಗವಾಗಿ ನೆಲಸಿರ್ಪರು ನೋಡ, ಅದೆಂತೆಂದಡೆ: ಆಧಾರಚಕ್ರದ ನಾಲ್ಕೆಸಳಮಧ್ಯದಲ್ಲಿ ನಕಾರಮಂತ್ರಮೂರ್ತಿ ಆಚಾರಲಿಂಗವಾಗಿ ನೆಲಸಿರ್ಪರು ನೋಡ. ಸ್ವಾಧಿಷ್ಠಾನಚಕ್ರದ ಆರೆಸಳಮಧ್ಯದಲ್ಲಿ ಮಕಾರಮಂತ್ರಮೂರ್ತಿ ಗುರುಲಿಂಗವಾಗಿ ನೆಲಸಿರ್ಪರು ನೋಡ. ಮಣಿಪೂರಕಚಕ್ರದ ಹತ್ತೆಸಳಮಧ್ಯದಲ್ಲಿ ಶಿಕಾರಮಂತ್ರಮೂರ್ತಿ ಶಿವಲಿಂಗವಾಗಿ ನೆಲಸಿರ್ಪರು ನೋಡ. ಅನಾಹತಚಕ್ರದ ಹನ್ನೆರಡೆಸಳಮಧ್ಯದಲ್ಲಿ ವಕಾರಮಂತ್ರಮೂರ್ತಿ ಚರಲಿಂಗವಾಗಿ ನೆಲಸಿರ್ಪರು ನೋಡ. ವಿಶುದ್ಧಿಚಕ್ರದ ಹದಿನಾರೆಸಳಮಧ್ಯದಲ್ಲಿ ಯಕಾರಮಂತ್ರಮೂರ್ತಿ ಪ್ರಸಾದಲಿಂಗವಾಗಿ ನೆಲಸಿರ್ಪರು ನೋಡ. ಆಜ್ಞಾಚಕ್ರದ ಎರಡೆಸಳ ಮಧ್ಯದಲ್ಲಿ ಓಂಕಾರಮಂತ್ರಮೂರ್ತಿ ಮಹಾಲಿಂಗವಾಗಿ ನೆಲಸಿರ್ಪರು ನೋಡ. ಇಂತು ಷಟ್ಚಕ್ರಂಗಳಮಧ್ಯದಲ್ಲಿ ನೆಲಸಿ, ನಿನ್ನ ಷಡ್ವಿಧಭೋಗಂಗಳ ಕೈಕೊಂಡು, ಆ ಪರಿಣಾಮವ ನಿನಗೆ ಸಂತೃಪ್ತಿಯ ಮಾಡಿ, ಶರಣಸತಿ ಲಿಂಗಪತಿ ಭಾವದಿಂದ ಮೇಲುಗಿರಿಮಂಟಪದ ನವರತ್ನ ಖಚಿತ ಸಹಸ್ರದಳ ಪದ್ಮಯುಕ್ತವಾದ ಪರಿಯಂಕದ ಮೇಲೆ ಲಿಂಗಾನುಭಾವರತಿಸುಖಾನಂದದಿಂದ ಶೋಭಿಸುವಂಥದೆ ಆಧ್ಯಾತ್ಮ ದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕಮೂರ್ತಿ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.