Index   ವಚನ - 97    Search  
 
ಅಯ್ಯ, ಇಂತು ನಿರವಯ ಶೂನ್ಯಲಿಂಗಾನುಭಾವ ಸ್ಥಲಾಚರಣೆಯ ಕರ್ತೃ ಗುರುಬಸವೇಶ್ವರಸ್ವಾಮಿಗಳ ಪಾದೋದಕ ಪ್ರಸಾದದ ಬೆಳಗಿನೊಳಗೆ ಬೆಳಗಾದರು ನೋಡ ಪ್ರಭುಸ್ವಾಮಿಗಳು. ಪ್ರಭುಸ್ವಾಮಿಗಳ ಪಾದೋದಕ-ಪ್ರಸಾದದ ನಿಜಚಿದ್ಬೆಳಗಿನೊಳಗೆ ಬೆಳಗಾದರು ನೋಡ ಗುರುಬಸವೇಶ್ವರಸ್ವಾಮಿಗಳು. ಇವರಿಬ್ಬರ ಪಾದೋದಕ-ಪ್ರಸಾದದ ಚಿದ್ಬೆಳಗಿನೊಳಗೆ ಚನ್ನಬಸವಣ್ಣ, ನಿರ್ಲಜ್ಜಶಾಂತಲಿಂಗೇಶ್ವರ, ಸಿದ್ಧರಾಮ ಮೊದಲಾದ ಸಕಲಪ್ರಮಥಗಣಂಗಳೆಲ್ಲ ಬಯಲೊಳಗೆ ಮಹಾಬಯಲಾದರು ನೋಡ. ಇಂತು ಜೋಗೈಸಿ ಏಕಸಮರಸವಾದ ಬಸವ-ಪ್ರಭು-ಚನ್ನಬಸವಣ್ಣ-ಪ್ರಮಥಗಣಂಗಳ ಪಾದೋದಕ-ಪ್ರಸಾದನೆ ರೂಪಾಗಿ, ಗುರುಸಿದ್ಧ-ಸಂಗನಬಸವಣ್ಣನೆಂಬಭಿಧಾನದಿಂದವತರಿಸಿ ಚಿದ್ಘನ ಮಹಾಂತ ಪ್ರಮಥಗಣಂಗಳ ಕೃಪಾದೃಷ್ಟಿಯಿಂದ ಸರ್ವಸಂಗಪರಿತ್ಯಾಗಸ್ಥಲ ಮೊದಲಾಗಿ ನಿರಾವಯ ಶೂನ್ಯಲಿಂಗಾನುಭಾವಸ್ಥಲ ಕಡೆಯಾದ ನವಸ್ಥಲಂಗಳೊಳಗೆ ಎರಡೆಂಬತ್ತೆಂಟುಕೋಟಿ ವಚನಾನುಭಾವದ ಸುಧಾರಸ್ವಾನುಭಾವ ಸೂತ್ರಕ್ಕೆ ಬೆಟ್ಟದ ನೆಲ್ಲಿ ಘಟ್ಟದ ಉಪ್ಪು ಕೂಡಿದೋಪಾದಿಯಲ್ಲಿ ಯೋಗ್ಯವಾದೇವು ನೋಡ ಸಂಗನಬಸವೇಶ್ವರ.