ನಾನು ಭಕ್ತ, ನಾನು ಶರಣ, ನಾನು ಐಕ್ಯನೆಂಬೊ
ಅಣ್ಣಗಳು ನೀವು ಕೇಳಿರೊ.
ಒಂದೇ ಮರದಲ್ಲಿ ಒಂಬತ್ತು ಪ್ರಮಾಣದ ಹಣ್ಣು;
ಆ ಹಣ್ಣನು ಅರಿವ ಪರಿಯೆಂತೆಂದಡೆ;
ಆಧಾರಚಕ್ರಮಂ ಬಲಿದು,
ಇಡಾ ಪಿಂಗಳ ಸುಷುಮ್ನನಾಳವ ಒಂದುಗೂಡಿ
ಊರ್ಧ್ವಮುಖದಲ್ಲಿ ಎತ್ತಿ ನಿಂದು,
ಆ ಹಣ್ಣ ಸವಿಯಬಲ್ಲಡೆ ಆತನೇ ಭಕ್ತ.
ಆತನೇ ಶರಣ, ಆತನೇ ಐಕ್ಯ.
ಇದನರಿಯದೆ ಹುಸಿಯ ನುಡಿವವರ ಕಂಡು ನಗುತಿರ್ದ
ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.