Index   ವಚನ - 32    Search  
 
ಆರು ಚಕ್ರದಲ್ಲಿ ಅರತೆನೆಂದು ನುಡಿವ ಅರಿವುಗೇಡಿಗಳು ನೀವು ಕೇಳಿರೋ. ಆಧಾರಚಕ್ರ ಪೃಥ್ವಿಗೆ ಸಂಬಂಧ; ಅಲ್ಲಿಗೆ ಬ್ರಹ್ಮ ಅಧಿದೇವತೆ, ಆಚಾರಲಿಂಗವಿಡಿದು ಯೋಗಿಯಾಗಿ ಸುಳಿದ. ಸ್ವಾಧಿಷ್ಠಾನಚಕ್ರ ಅಪ್ಪುವಿಗೆ ಸಂಬಂಧ: ಅಲ್ಲಿಗೆ ವಿಷ್ಣು ಅಧಿದೇವತೆ, ಶ್ರೀಗುರುಲಿಂಗವ ಪಿಡಿದು ಜೋಗಿಯಾಗಿ ಸುಳಿದ. ಮಣಿಪೂರಕ ಚಕ್ರ ಅಗ್ನಿಗೆ ಸಂಬಂಧ; ಅಲ್ಲಿಗೆ ರುದ್ರನಧಿದೇವತೆ, ಜಂಗಮಲಿಂಗವ ಪಿಡಿದು ಶ್ರಾವಣಿಯಾಗಿ ಸುಳಿದ. ವಿಶುದ್ಧಿಚಕ್ರ ವಾಯುವಿಗೆ ಸಂಬಂಧ; ಅಲ್ಲಿಗೆ ಸದಾಶಿವನಧಿದೇವತೆ, ಪ್ರಸಾದಲಿಂಗವ ಪಿಡಿದು ಕಾಳಾಮುಖಿಯಾಗಿ ಸುಳಿದ. ಆಜ್ಞಾಚಕ್ರಕ್ಕೆ ಪರತತ್ವದ ಸಂಬಂಧ; ಅಲ್ಲಿಗೆ ಪರಶಿವನಧಿದೇವತೆ, ಮಹಾಲಿಂಗವಪಿಡಿದು ಪಶುಪತಿಯಾಗಿ ಸುಳಿದ. ಇಂತೀ ಆರು ದರುಶನಕ್ಕೆ ಬಂದರೆ ಅಂಗಳ ಪೊಗಿಸಿರಿ. ಆ ಲಿಂಗವು ನಿಮಗೆ ತಪ್ಪಿದವು, ಮುಂದಿರ್ದ ಗುರುಲಿಂಗಜಂಗಮದ ಭೇದವನರಿಯದೆ ಆರು ಸ್ಥಲದಲ್ಲಿ ತೃಪ್ತಿಯಾಯಿತ್ತೆಂಬವರ ಕಂಡು ನಾಚಿತ್ತು ಎನ್ನ ಮನವು ಗೊಹೇಶ್ವರಪ್ರಿಯ ನಿರಾಳಲಿಂಗಾ.