Index   ವಚನ - 33    Search  
 
ಪೃಥ್ವಿಯ ಮಧ್ಯದಲ್ಲೊಂದು ಬೀಜವಲ್ಲದ ವೃಕ್ಷ ಹುಟ್ಟಿತ್ತು. ಆ ವೃಕ್ಷಕ್ಕೆ ಒಂದು ಪೂರ್ವಭಾಗವೆಂಬ ಗೊನೆ ಹುಟ್ಟಿತ್ತು. ಆ ಗೊನೆಗೆ ತಲೆಕೆಳಗಾಗಿ ಒಂದು ಕಮಲ ಹುಟ್ಟಿತ್ತು. ಆ ಕಮಲದ ಎಸಳು ಮರ್ತ್ಯಮುಖ: ಅದರ ಪೂರ್ವಮುಖವೇ ಆಕಾಶ. ಆ ಕಮಲಕ್ಕೆ ನವಪರಿ ಕಾಯಿ ನಾಲ್ಕರಲಿ ರಸತುಂಬಿ ಹಣ್ಣಾಯಿತ್ತು. ನಾಲ್ಕು ಆರು ಹತ್ತು ಹನ್ನೆರಡು ಹದಿನಾರು ಇಂತೀ ನಾಲ್ವತ್ತೆಂಟು ಮಂದಿ ಆ ಹಣ್ಣಿನ ಗ್ರಾಹಕರು. ಆ ಹಣ್ಣ ಮಾರುವವರು ಸಾವಿರಾಳಿನ ನಾಯಕರು. ಆ ಹಣ್ಣಿನ ಗ್ರಾಹಕರು, ಆ ಹಣ್ಣ ಮೂರು ರತ್ನಕ್ಕೆ ಬೆಲೆಯನಿಟ್ಟರು. ಮೂರು ರತ್ನಕ್ಕೆ ಕೊಡಬಹುದೆ? ಎಂದು ಆ ಸಾವಿರಾಳಿನ ನಾಯಕರು ಹಿಡಿದು ಶಿಕ್ಷೆಯ ಮಾಡಿದರು. ಮೂರುಪುರದ ಅರಸು ಅಶ್ವಾರೋಹಿ ಸಾವಿರಾಳಿನ ನಾಯಕರು ಆ ಹಣ್ಣ ಕೊಂಡು ಮೇಲುಗಿರಿಯ ಕೈಲಾಸದ ಅರಸನ ಸಂದರುಶನವ ಮಾಡಿದರು. ಆ ಗಿರಿರಾಜನು ಆ ಹಣ್ಣ ಕಂಡು ಬೆರಗಾದ. ಆ ಹಣ್ಣಿನ ಸವಿಯ ಬಲ್ಲವರ ತೋರಿಸಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ.