ಪೃಥ್ವಿಯ ಮಧ್ಯದಲ್ಲೊಂದು
ಬೀಜವಲ್ಲದ ವೃಕ್ಷ ಹುಟ್ಟಿತ್ತು.
ಆ ವೃಕ್ಷಕ್ಕೆ ಒಂದು ಪೂರ್ವಭಾಗವೆಂಬ ಗೊನೆ ಹುಟ್ಟಿತ್ತು.
ಆ ಗೊನೆಗೆ ತಲೆಕೆಳಗಾಗಿ ಒಂದು ಕಮಲ ಹುಟ್ಟಿತ್ತು.
ಆ ಕಮಲದ ಎಸಳು ಮರ್ತ್ಯಮುಖ:
ಅದರ ಪೂರ್ವಮುಖವೇ ಆಕಾಶ.
ಆ ಕಮಲಕ್ಕೆ ನವಪರಿ ಕಾಯಿ ನಾಲ್ಕರಲಿ
ರಸತುಂಬಿ ಹಣ್ಣಾಯಿತ್ತು.
ನಾಲ್ಕು ಆರು ಹತ್ತು ಹನ್ನೆರಡು ಹದಿನಾರು
ಇಂತೀ ನಾಲ್ವತ್ತೆಂಟು ಮಂದಿ ಆ ಹಣ್ಣಿನ ಗ್ರಾಹಕರು.
ಆ ಹಣ್ಣ ಮಾರುವವರು ಸಾವಿರಾಳಿನ ನಾಯಕರು.
ಆ ಹಣ್ಣಿನ ಗ್ರಾಹಕರು,
ಆ ಹಣ್ಣ ಮೂರು ರತ್ನಕ್ಕೆ ಬೆಲೆಯನಿಟ್ಟರು.
ಮೂರು ರತ್ನಕ್ಕೆ ಕೊಡಬಹುದೆ?
ಎಂದು ಆ ಸಾವಿರಾಳಿನ ನಾಯಕರು
ಹಿಡಿದು ಶಿಕ್ಷೆಯ ಮಾಡಿದರು.
ಮೂರುಪುರದ ಅರಸು ಅಶ್ವಾರೋಹಿ
ಸಾವಿರಾಳಿನ ನಾಯಕರು ಆ ಹಣ್ಣ ಕೊಂಡು
ಮೇಲುಗಿರಿಯ ಕೈಲಾಸದ ಅರಸನ ಸಂದರುಶನವ ಮಾಡಿದರು.
ಆ ಗಿರಿರಾಜನು ಆ ಹಣ್ಣ ಕಂಡು ಬೆರಗಾದ.
ಆ ಹಣ್ಣಿನ ಸವಿಯ ಬಲ್ಲವರ ತೋರಿಸಯ್ಯ
ಗೊಹೇಶ್ವರಪ್ರಿಯ ನಿರಾಳಲಿಂಗಾ.