Index   ವಚನ - 34    Search  
 
ಆರು ಗುಣವೆಂಬೊ ಅರಿಕೆಯನೈದೆವೆಂಬ ಅರುಹಿರಿಯರು ನೀವು ಕೇಳಿರೋ. ಅರುವೆಂಬುದನೆ ಅರಿದು, ಮರವೆಂಬುದನೆ ಮರದು, ಪರಶಿವಗುರುಮೂರ್ತಿಯೆಂದು ಗುರುವ ಕೊಂಡಾಡುತ್ತ ಆ ಗುರುಮೂರ್ತಿ ಗುರುದೀಕ್ಷವನೆ ಶಿರದಮೇಲಿಹ ಹಸ್ತವನು ಆ ತತ್‍ಕ್ಷಣದಲ್ಲಿ ಕಾರುಣ್ಯದಿಂದಲಿ ಪರಮಪ್ರಸಾದ ಸಾರಾಯವ ಕೊಂಡದನು ಅರಿತು, ಮನದಲ್ಲಿ ಆಧಾರಚಕ್ರವಂ ಬಲಿದು ಇಡಾ ಪಿಂಗಳ ಸುಷುಮ್ನವೆಂಬ ಸಂದೇಹವನಳಿದು, ಏಕನಾಳವ ಕೂಡುತ್ತ ಮೂರುಪುರದ ಬಾಗಿಲಂಗಳ ಪೊಕ್ಕು ಪರಮಪ್ರಸಾದವ ಕೊಡುತಿರ್ದ ಘನಲಿಂಗವ ಕೊಡಬಲ್ಲರೆ ಅದೇ ಅರುವು ಹಿರಿಯತನ. ಇದನರಿಯದೆ ಅರುಹಿರಿಯರೆಂದು ತಿರುಗುವ ಬೂಟಕರಿಗೆ ನಾನೇನೆಂಬೆನಯ್ಯಾ ಗೊಹೇಶ್ವರಪ್ರಿಯ ನಿರಾಳಲಿಂಗಾ!