Index   ವಚನ - 96    Search  
 
ಪೃಥ್ವಿ ಅಪ್ಪು ತೇಜ ವಾಯುವಾಕಾಶವೆಂಬ ಪಂಚಭೂತ ವಿಕಾರತನುಗಳು ಲಿಂಗಪೂಜೆಯ ಬೆಬ್ಬನೆ ಬೆರೆವರು ಉಪದೇಶಮಾರ್ಗ. ತನುಮನಧನವ ಪ್ರಾಣಾದಿಗಳ ಗುರುಲಿಂಗಕ್ಕೆ ಕೊಟ್ಟೆವೆಂಬರು ನೋಡಾ! ನಾಚಿಕೆಯಿಲ್ಲದ ಹೇಸಿಗೆಗೆಟ್ಟ ಉನ್ಮತ್ತರು. ಲಿಂಗವಿದ್ದುದಕ್ಕೆ ಫಲವೇನೋ ಅಂಗವಿಕಾರವಳಿಯದನ್ನಕ್ಕ, ಇಂದ್ರಿಯ ಸಂಗ ಮರೆಯದನ್ನಕ್ಕ ಪ್ರಸಾದವ ಕೊಂಡೆವೆಂಬರು ನೋಡಾ ಬಹುಭಾಷಿಗಳು. ನಿಧಾನವಿದ್ದ ನೆಲ ನುಡಿವುದು. ಭೂತವಿಡಿದ ಮನುಷ್ಯ ತನ್ನ ತಾ ಮರೆದಿಹ. ಲಿಂಗವಿದ್ದುದಕ್ಕೆ ಪ್ರಮಾಣವೇನೋ ನಡೆತತ್ವ ನುಡಿ ಸಿದ್ಧಾಂತವಾಗಬೇಕು. ಪಂಚೇಂದ್ರಿಯಂಗಳ ಉನ್ಮತ್ತವಡಗಬೇಕು. ಸದಾಚಾರವೆಂತಳವಡುವದು ಸದಾಚಾರ ತನ್ನಲ್ಲಿ ಸಾಹಿತ್ಯವಾಗದನ್ನಕ್ಕ. ಇಹಪರವನರಸುವ ಸಂದೇಹಿಗಳಿಗೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.