ಶಿವ ಶಕ್ತಿಯಲ್ಲಿ ತೃಪ್ತರಾದವರು ನೀವು ಕೇಳಿರೆ.
ನಿಮ್ಮ ಗುರು ಶಕ್ತಿಯ ಮೇಲೆ
ಸ್ವಾಯತವ ಮಾಡಿದನು.
ಶಿವನ ಮೇಲೆ ಸ್ವಾಯತವ
ಮಾಡುವ ಗುರುವಿಲ್ಲ.
ಇಲ್ಲಿಯೆಲ್ಲಾ ಶಿವ ಶಕ್ತಿಯೆಂಬ
ಶಬ್ದದೊಳಗಳಿಯಿತ್ತಲ್ಲಾ ಲೋಕವೆಲ್ಲಾ!
ಆಚಾರ್ಯನು ಕುಟಲವ
ಕೊಟ್ಟು ಹೋದನಲ್ಲಾ ಲೋಕದ ಕೈಯಲ್ಲಿ!
ರೂಪಿಗಳು ಮಾಡಿದ
ಶಬ್ದದೊಳಗಳಿಯಿತ್ತಲ್ಲಾ ಲೋಕವೆಲ್ಲಾ!
ಪಾಷಾಣ ದಂದುಗದ
ಹೇಸಿಕೆಯೊಳಗೆ ಸತ್ತುದಲ್ಲಾ ಲೋಕವೆಲ್ಲಾ!
ಕೇಳಲಾಗದೀ ಶಬ್ದವ.
ಶಿವನ ಕರೆದು ಸ್ವಾಯತವ ಮಾಡಿದೆನು.
ಶಕ್ತಿಯ ಕರೆದೆನ್ನ ಮಠಕ್ಕೆ ಕಾಯಕವ ಮಾಡಿಸಿದೆನು,
ಇವರಿಬ್ಬರ ಕೈಯಲ್ಲಿ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನಿಸಿದೆನು.