Index   ವಚನ - 5    Search  
 
ಎಲೆ ಕರುಣಿ, ಜನನಿಯ ಜಠರಕ್ಕೆ ತರಬೇಡವಯ್ಯ ತಂದರೆ ಮುಂದೆ ತಾಪತ್ರಯಕ್ಕೊಳಗಾದ ತರಳೆಯ ದುಃಖದ ಬಿನ್ನಪವ ಕೇಳಯ್ಯ. ಆಚಾರಲಿಂಗ ಸ್ವರೂಪವಾದ ಘ್ರಾಣ ಗುರುಲಿಂಗ ಸ್ವರೂಪವಾದ ಜಿಹ್ವೆ ಶಿವಲಿಂಗ ಸ್ವರೂಪವಾದ ನೇತ್ರ ಜಂಗಮಲಿಂಗ ಸ್ವರೂಪವಾದ ತ್ವಕ್ಕು ಪ್ರಸಾದಲಿಂಗ ಸ್ವರೂಪವಾದ ಶ್ರೋತ್ರ ಮಹಾಲಿಂಗ ಸ್ವರೂಪವಾದ ಪ್ರಾಣ ಪಂಚಬ್ರಹ್ಮ ಸ್ವರೂಪವಾದ ತನು ಇಂತಿವೆಲ್ಲವು ಕೂಡಿ ಪರಬ್ರಹ್ಮ ಸ್ವರೂಪ ತಾನೆಯಾಗಿ ಆನೆಯ ರೂಪತಾಳಿ ಕೇರಿಯ ನುಸುಳುವ ಹಂದಿಯಂತೆ ಮೆಟ್ಟುಗುಳಿಯೊತ್ತಿನ ಉಚ್ಚೆಯ ಬಚ್ಚಲೆಂಬ ಹೆಬ್ಬಾಗಿಲ ದಿಡ್ಡಿಯಲ್ಲಿ ಎಂತು ನುಸುಳುವೆನಯ್ಯ? ಹೇಸಿ ಹೇಡಿಗೊಂಡೆನಯ್ಯಾ ನೊಂದೆನಯ್ಯ ಬೆಂದೆನಯ್ಯ ಬೇಗೆವರಿದು ನಿಂದುರಿದೆನಯ್ಯ ಎನ್ನ ಮೊರೆಯ ಕೇಳಯ್ಯ ಮಹಾಲಿಂಗವೇ ಎನ್ನ ಭವಕ್ಕೆ ನೂಂಕಬೇಡಯ್ಯ. ನಾನು ಅನಾದಿಯಲ್ಲಿ ಭೋಗಕ್ಕಾಸೆಯ ಮಾಡಿದ ಫಲದಿಂದ ಅಂದಿಂದ ಇಂದು ಪರಿಯಂತರ ನಾನಾ ಯೋನಿಯಲ್ಲಿ ಬಂದು ನಾಯಿಯುಣ್ಣದ ಓಡಿನಲ್ಲಿ ಉಂಡು, ನರಗೋಟಲೆಗೊಂಡೆನಯ್ಯ ಎನಗೆ ಹೊನ್ನು ಬೇಡ ಹೆಣ್ಣು ಬೇಡ ಮಣ್ಣು ಬೇಡ ಫಲವು ಬೇಡ ಪದವು ಬೇಡ ನಿಮ್ಮಶ್ರೀಪಾದವನೊಡಗೂಡಲೂಬೇಡ ಎನಗೆ ಪುರುಷಾಕಾರವೂ ಬೇಡವಯ್ಯ ಎನ್ನ ಮನ ಒಪ್ಪಿ ಪಂಚೈವರು ಸಾಕ್ಷಿಯಾಗಿ ನುಡಿಯುತ್ತಿಪ್ಪೆನಯ್ಯಾ. ನಿಮ್ಮಾಣೆ ಎನಗೊಂದ ಕರುಣಿಸಯ್ಯ ತಂದೆ ಡೋಹರ ಕಕ್ಕಯ್ಯ ಮಾದಾರ ಚೆನ್ನಯ್ಯ ಅಂಬಿಗರ ಚೌಡಯ್ಯ ಇಂತಪ್ಪ ಶಿವಶರಣರ ಮನೆಯ ಬಾಗಿಲ ಕಾವ ಶುನಕನ ಮಾಡಿ ಎನ್ನ ನೀ ನಿಲಿಸಯ್ಯ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.