Index   ವಚನ - 4    Search  
 
ಕುನ್ನಿಗೆ ರನ್ನದ ಹಲ್ಲಣವ ಹಾಕಿದಂತೆ ಹಂದಿಯ ತಂದು ಅಂದಣವನೇರಿಸಿದಂತೆ ಎನಗೊಲಿದು ಶಿವಲಾಂಛನವ ಕೊಟ್ಟ ಕಾರಣವೇನಯ್ಯ ಗುರುವೆ? ನಾನು ಲಿಂಗದ್ರೋಹವ ಮಾಡಿ ಜಂಗಮವ ಕೆಡನುಡಿದೆನು. ಕೈವಿಡಿದ ಸ್ತ್ರೀಯ ಕಡಿಖಂಡವ ಮಾಡಿದೆ ಒಡನಾಡಿದವರ ಕಡುಕೋಪದಿನಿರಿದುಕೊಂದೆ ನಂಬಿದ ಹಳೆಯರ ಪ್ರಾಣಕ್ಕೆ ಮುನಿದೆ ಪಶುವಿನ ಶಿಶುವ ತಲೆಯೊಡೆಯಿಕ್ಕಿದೆ ಗೋವ ಕೊಂದವರ ವಹಿಸಿಕೊಂಡೆ ಪರಧನವ ಕದ್ದೆ, ಪರಸ್ತ್ರೀಯರಿಗಳುಪಿದೆ ಭವಿಹೆಣ್ಣುಗಳ ಕೂಡುಂಡ ಬಾಯಹುಳುಕನಯ್ಯ ನಾನು. ಇಂತಪ್ಪ ಮಹಾಪಾತಕಂಗಳ ಮಾಡಿದ್ದ ಹೊಲೆಯನಿವನೆಂದು ನೀನರಿದ ಬಳಿಕ ಎನಗೆ ವಿರಕ್ತಿಯೆಂಬ ಲಾಂಛನ ಕೊಟ್ಟುದು ಕೋಪದ ಕಾರಣವಲ್ಲದೆ ಕೃಪೆಯಲ್ಲವಯ್ಯ. ಅದೇನು ಕಾರಣವೆಂದೊಡೆ ಬಟ್ಟೆಯ ಬಡಿದ ಕಳ್ಳಬಂಟನ ಭೂಪಾಲರು ಬೇಹನಿಕ್ಕಿ ಹಿಡಿತರಿಸಿ ನಾಳೆ ಶೂಲಕ್ಕೆ ತೆಗೆಸುವರೆ ಇಂದು ಕಳ್ಳಬಂಟಂಗೆ ಪುನುಗು ಜವಾಜಿಯ ಲೇಪಿಸಿ ಹೂವಿನ ದಂಡೆಯ ಕೊರಳು- ಮಂಡೆ-ಉರದೊಳಗೆ ಅಡ್ಡಹಾಕಿ ಹಾಲು ತುಪ್ಪ ಹಣ್ಣುಗಳ ಉಣಕೊಟ್ಟು ಅಡಿಗಡಿಗೆ, ಅಡಕೆಲೆಯ, ಮೆಲುಕೊಟ್ಟು ವೀರವೃಂದದ ಹಲಗೆ ಕಹಳೆಯಂ ಅವನ ಮುಂದೆ ಸಂಭ್ರಮಿಸುವ ಬರಿಯುಪಚಾರದಂತೆ ನಾನು ಮಾಡಿದ ಸರ್ವ ದ್ರೋಹಕ್ಕೆ ನಿನ್ನ ಮನನೊಂದು ಎನ್ನ ಎಕ್ಕಲ ನರಕಕ್ಕೆ ನೂಂಕುವುದಕ್ಕೋಸ್ಕರ ಕೊಟ್ಟ ಸಟೆಯುಪಚಾರಕ್ಕಾದ ಲಾಂಛನವಲ್ಲದೆ ದಿಟದೊಲವಲ್ಲವಯ್ಯ ದೇವನೆ, ನಾನು ಮುಂದನರಿಯದಂಧಕನಯ್ಯ ನಿನ್ನ ಬಾಗಿಲ ಕಾವ ಗೊಲ್ಲನಯ್ಯ ನಿನ್ನ ಕುದುರೆಯ ಸಾಕುವ ಗೋವನಯ್ಯ ನಿನ್ನ ಚಮ್ಮಾವುಗೆಯ ಹೊತ್ತು ಬರುವ ಬೋವರ ಲೆಂಕನಯ್ಯ ನಿನ್ನ ಪಡುಗವ ಹಿಡಿವ ಪಡುಡಿಂಡಿಯಯ್ಯ ನೀನುಗುಳ್ದ ತಂಬುಲವನುಂಬ ನಿನ್ನಾದಿಯ ಹಳೆಯನಯ್ಯ ನಿನ್ನಂಗಳದಲ್ಲಿ ಬೊಗಳುವ ಶ್ವಾನನಯ್ಯ ಎನ್ನ ತಪ್ಪ ಕಾಯಯ್ಯ ಶಿವಧೋ ಶಿವಧೋ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.