Index   ವಚನ - 6    Search  
 
ಕೇಳು ಕೇಳಯ್ಯ ಆತ್ಮನೇ ಎರಡು ಪ್ರಕಾರದ ಆದಿಮಧ್ಯ ಅವಸಾನವ ತಿಳಿದು ನೋಡು ಕೆಡಬೇಡ ಕೆಡಬೇಡ. ತಂದೆಯ ದೆಸೆಯಿಂದ ತಾಯಿ ಯೋನಿಚಕ್ರದಲ್ಲಿ ಬಂದುದೇ ಆದಿ. ಹೊನ್ನು ಹೆಣ್ಣು ಮಣ್ಣು ನನ್ನದೆಂದು ಹಿಡಿದುಷಟ್ಕರ್ಮವನಾಚರಿಸಿ ಸುಖದುಃಖಂಗಳಲ್ಲಿ ಮುಳುಗಿಪ್ಪುದೇ ಮಧ್ಯ. ಆತ್ಮನ ಕೃಪೆಯಿಂದ ಅರೆದು ಸಣ್ಣಿಸಿಕೊಂಡು ಭವಕ್ಕೆ ನೂಂಕಿಸಿಕೊಳ್ಳುವುದೇ ಅವಸಾನ. ಇವನರಿದು ಇವಕ್ಕೆ ಹೇಹಮಂ ಮಾಡು. ಮತ್ತೆ ಆದಿ ಮಧ್ಯ ಅವಸಾನಮಂ ತಿಳುಹುವೆನು ನಾನು ಮಹಾಲಿಂಗದ ಗರ್ಭಾಬ್ಧಿಯಲ್ಲಿ ಬಂದೆನೆಂಬುದೇ ಆದಿ. ಲೋಕದ ವ್ಯವಹಾರವ ಸಾಕುಮಾಡಿ ಇಷ್ಟಲಿಂಗದಲ್ಲಿ ನಿಷ್ಠೆಯಾಗಿ ಪ್ರಾಣಲಿಂಗದಲ್ಲಿ ಪರಿಣಾಮಿಯಾಗಿ ಕ್ಷುತ್ತಿಂಗೆ ಭಿಕ್ಷೆ ಶೀತಕ್ಕೆ ರಗಟೆಯಾಗಿ ಮೋಕ್ಷಗಾಮಿಯಪ್ಪುದೇ ಮಧ್ಯ. ತನುವ ಬಿಡುವಲ್ಲಿ ಮನವ ಪರಬ್ರಹ್ಮಕ್ಕೆ ಸಮರ್ಪಣ ಮಾಡಿ ಜನನ-ಮರಣ ಗೆಲುವುದೇ ಅವಸಾನ. ಇದನರಿದು ಇದಕ್ಕೆ ಮೆಚ್ಚಿ ಲಿಂಗವನೆ ಸಾಧಿಸು ವೇಧಿಸು. ಕಪಿಯ ಕೈಯ ಕನ್ನಡಿಯಂತೆ ಕುಣಿದರೆ ಕುಣಿದು ಏಡಿಸಿದರೆ ಏಡಿಸಿ, ಹಲ್ಲುಕಿರಿದರೆ ಹಲ್ಲುಕಿರಿದು ಮನವಾಡಿದಂತೆ ನೀನಾಡಬೇಡ. ಮನವಾಡಿದಂತೆ ಆಡಿದವಂಗೆ ಭಕ್ತಿಯೆಲ್ಲಿಯದು? ಜ್ಞಾನವೆಲ್ಲಿಯದು? ವೈರಾಗ್ಯವೆಲ್ಲಿಯದು? ವಿರಕ್ತಿಯೆಲ್ಲಿಯದು? ಮುಕ್ತಿಯೆಲ್ಲಿಯದಯ್ಯಾ? ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.