ಎಲೆ ಕರುಣಿ,
ಜನನಿಯ ಜಠರಕ್ಕೆ ತರಬೇಡವಯ್ಯ
ತಂದರೆ ಮುಂದೆ ತಾಪತ್ರಯಕ್ಕೊಳಗಾದ
ತರಳೆಯ ದುಃಖದ ಬಿನ್ನಪವ ಕೇಳಯ್ಯ.
ಆಚಾರಲಿಂಗ ಸ್ವರೂಪವಾದ ಘ್ರಾಣ
ಗುರುಲಿಂಗ ಸ್ವರೂಪವಾದ ಜಿಹ್ವೆ
ಶಿವಲಿಂಗ ಸ್ವರೂಪವಾದ ನೇತ್ರ
ಜಂಗಮಲಿಂಗ ಸ್ವರೂಪವಾದ ತ್ವಕ್ಕು
ಪ್ರಸಾದಲಿಂಗ ಸ್ವರೂಪವಾದ ಶ್ರೋತ್ರ
ಮಹಾಲಿಂಗ ಸ್ವರೂಪವಾದ ಪ್ರಾಣ
ಪಂಚಬ್ರಹ್ಮ ಸ್ವರೂಪವಾದ ತನು
ಇಂತಿವೆಲ್ಲವು ಕೂಡಿ ಪರಬ್ರಹ್ಮ ಸ್ವರೂಪ ತಾನೆಯಾಗಿ
ಆನೆಯ ರೂಪತಾಳಿ ಕೇರಿಯ ನುಸುಳುವ ಹಂದಿಯಂತೆ
ಮೆಟ್ಟುಗುಳಿಯೊತ್ತಿನ ಉಚ್ಚೆಯ ಬಚ್ಚಲೆಂಬ ಹೆಬ್ಬಾಗಿಲ ದಿಡ್ಡಿಯಲ್ಲಿ
ಎಂತು ನುಸುಳುವೆನಯ್ಯ?
ಹೇಸಿ ಹೇಡಿಗೊಂಡೆನಯ್ಯಾ ನೊಂದೆನಯ್ಯ ಬೆಂದೆನಯ್ಯ
ಬೇಗೆವರಿದು ನಿಂದುರಿದೆನಯ್ಯ
ಎನ್ನ ಮೊರೆಯ ಕೇಳಯ್ಯ ಮಹಾಲಿಂಗವೇ
ಎನ್ನ ಭವಕ್ಕೆ ನೂಂಕಬೇಡಯ್ಯ.
ನಾನು ಅನಾದಿಯಲ್ಲಿ ಭೋಗಕ್ಕಾಸೆಯ ಮಾಡಿದ ಫಲದಿಂದ
ಅಂದಿಂದ ಇಂದು ಪರಿಯಂತರ ನಾನಾ ಯೋನಿಯಲ್ಲಿ ಬಂದು
ನಾಯಿಯುಣ್ಣದ ಓಡಿನಲ್ಲಿ ಉಂಡು, ನರಗೋಟಲೆಗೊಂಡೆನಯ್ಯ
ಎನಗೆ ಹೊನ್ನು ಬೇಡ ಹೆಣ್ಣು ಬೇಡ ಮಣ್ಣು ಬೇಡ
ಫಲವು ಬೇಡ ಪದವು ಬೇಡ ನಿಮ್ಮಶ್ರೀಪಾದವನೊಡಗೂಡಲೂಬೇಡ
ಎನಗೆ ಪುರುಷಾಕಾರವೂ ಬೇಡವಯ್ಯ
ಎನ್ನ ಮನ ಒಪ್ಪಿ ಪಂಚೈವರು ಸಾಕ್ಷಿಯಾಗಿ ನುಡಿಯುತ್ತಿಪ್ಪೆನಯ್ಯಾ.
ನಿಮ್ಮಾಣೆ ಎನಗೊಂದ ಕರುಣಿಸಯ್ಯ ತಂದೆ
ಡೋಹರ ಕಕ್ಕಯ್ಯ ಮಾದಾರ ಚೆನ್ನಯ್ಯ ಅಂಬಿಗರ ಚೌಡಯ್ಯ
ಇಂತಪ್ಪ ಶಿವಶರಣರ ಮನೆಯ ಬಾಗಿಲ ಕಾವ ಶುನಕನ ಮಾಡಿ
ಎನ್ನ ನೀ ನಿಲಿಸಯ್ಯ
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.
Art
Manuscript
Music
Courtesy:
Transliteration
Ele karuṇi,
jananiya jaṭharakke tarabēḍavayya
tandare munde tāpatrayakkoḷagāda
taraḷeya duḥkhada binnapava kēḷayya.
Ācāraliṅgasvarūpavāda ghrāṇa
guruliṅgasvarūpavāda jihve
śivaliṅgasvarūpavāda nētra
jaṅgamaliṅgasvarūpavāda tvakku
prasādaliṅgasvarūpavāda śrōtra
mahāliṅgasvarūpavāda prāṇa
pan̄cabrahma svarūpavāda tanu
intivellavu kūḍi parabrahmasvarūpa tāneyāgi
āneya rūpatāḷi kēriya nusuḷuva handiyante
meṭṭuguḷiyottina ucceya baccalemba hebbāgila diḍḍiyalli
entu nusuḷuvenayya?
Hēsi hēḍigoṇḍenayya nondenayya bendenayya
bēgevaridu ninduridenayya
enna moreya kēḷayya mahāliṅgavē
enna bhavakke nūṅkabēḍayya.
Nānu anādiyalli bhōgakkāseya māḍida phaladinda
andinda indu pariyantara nānā yōniyalli bandu
nāyiyuṇṇada ōḍinalli uṇḍu, naragōṭalegoṇḍenayya
enage honnu bēḍa heṇṇu bēḍa maṇṇu bēḍa
phalavu bēḍa padavu bēḍa nim'ma śrīpādavanoḍagūḍalūbēḍa
enage puruṣākāravū bēḍavayya
enna mana oppi pan̄caivaru sākṣiyāgi nuḍiyuttippenayyā.
Nim'māṇe enagonda karuṇisayya tande
ḍ'̔ōhara kakkayya mādāra cennayya ambigara cauḍayya
intappa śivaśaraṇara maneya bāgila kāva śunakana māḍi
enna nī nilisayyā
ghanaliṅgiya mōhada cennamallikārjuna.