Index   ವಚನ - 7    Search  
 
ಏನೆಂಬೆನೇನೆಂಬೆನಯ್ಯ? ಮತಿಗೆಟ್ಟು ಮಾನವಲೋಕಕ್ಕೆ ಬಂದೆ. ಬಂದ ಬರವಿನಲ್ಲಿಯೆ ಭವವೆಂಬ ಭೂಪತಿ ಎನ್ನ ಸೆರೆವಿಡಿದು ಕಾಲ-ಕಾಮರ ವಶಕ್ಕೆ ಕೊಟ್ಟನಯ್ಯ. ಕಾಲಂಗೆ ಕಾಯುವ ದಂಡವ ತೆತ್ತದ್ದು ಲೆಕ್ಕವಿಲ್ಲ. ಮನಸಿಜಂಗೆ ಮನವ ದಂಡವಿತ್ತುದ್ದು ಲೆಕ್ಕವಿಲ್ಲ. ಹೋದಹೆನೆಂದರೆ ಒಳಕಾವಲವರು ಹೊರಕಾವಲವರು ಹೊಗಲೀಸರು. ನನ್ನ ಸೆರೆಯಲ್ಲಿ ನಾನು ಬಿಡಿಸಿಕೊಂಡು ಹೋದಹೆನೆಂದರೆ ನಾನು ದರಿದ್ರನಯ್ಯ. ಎನ್ನ ಸೆರೆಯ ಬಿಡಿಸಿಕೊಳ್ಳಿರಯ್ಯ ಬಸವಾದಿ ಪ್ರಮಥರೇ. ನಿಮ್ಮ ಸೆರಗೊಡ್ಡಿ ಬೇಡಿಕೊಂಬೆನಯ್ಯ. ಭಕ್ತಿಗೆ ಭಂಡಾರವಾಗಿಪ್ಪ ಸಂಗನ ಬಸವಣ್ಣ, ಎನಗೆ ಹಾಗತೂಕ ಭಕ್ತಿಯ ಕೊಡಯ್ಯ. ಪ್ರಸಾದವೆ ಚಿತ್ಪಿಂಡಸ್ವರೂಪವಾದ ಚೆನ್ನಬಸವಣ್ಣ ಎನಗೆ ಹಾಗತೂಕ ಜ್ಞಾನವ ಕೊಡಯ್ಯ. ಮಾಯಾಕೋಲಾಹಲನಪ್ಪ ಅಲ್ಲಮಪ್ರಭುವೇ, ಎನಗೆ ಹಾಗತೂಕ ವೈರಾಗ್ಯವ ಕೊಡಯ್ಯ. ಬೆಟ್ಟದ ಗುಂಡತಂದು ಇಷ್ಟಲಿಂಗದಲ್ಲಿ ಐಕ್ಯವ ಮಾಡಿದ ಘಟ್ಟಿವಾಳಲಿಂಗವೇ, ಎನಗೆ ಹಾಗತೂಕ ಲಿಂಗವ ಕೊಡಯ್ಯ. ಈ ನಾಲ್ಕು ಹಾಗ ಕೂಡಿದಲ್ಲಿಯೆ ಮನಲಿಂಗದಲ್ಲಿ ಒಂದು ಹಣಮಪ್ಪುದು. ಮನಲಿಂಗದಲ್ಲಿ ಒಂದು ಹಣವಾದಲ್ಲಿಯ ಎನಗೆ ಚಂದ್ರಾಯುಧ ದೊರಕೊಂಬುದು. ಆ ಚಂದ್ರಾಯುಧವಂ ಪಿಡಿದು, ಒಳಕಾವಲ ನಾಲ್ವರ ಕೊರಳ ಕೊಯ್ದು, ಹೊರಕಾವಲೈವರ ಹರಿಹಂಚುಮಾಡಿ ಕೂಟದ ಕಾವಲವರ ಪಾಟಿಮಾಡದೆ, ಭವದ ಬಳ್ಳಿಯ ಕೊಯ್ದು,ಕಾಲ ಕಾಮರ ಕಣ್ಣ ಕಳೆದು, ಎಡಬಲದ ಹಾದಿಯ ಹೊದ್ದದೆ, ನಡುವಣ ಸಣ್ಣ ಬಟ್ಟೆಗೊಂಡು, ರತ್ನಾಚಲವನೇರಿ, ಅಲ್ಲಿಪ್ಪ ಲಿಂಗಮಂ ಬಲಗೊಂಡು, ನೀವಿದ್ದ ಉನ್ಮನಿಯ ಪುರಕ್ಕೆ ಬಂದು, ನಿಮ್ಮ ಪಡುಗ ಪಾದರಕ್ಷೆಯಂ ಪಿಡಿದು, ನಿಮ್ಮ ಬಾಗಿಲ ಕಾಯ್ದಿಪ್ಪುದೇ ಎನಗೆ ಭಾಷೆ. ಎನ್ನ ಬಿನ್ನಪವ ನೀವು ಮನವೊಲಿದು ಕರುಣಿಪುದಯ್ಯ ಇದಕೆ ನೀವೇ ಸಾಕ್ಷಿಯಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಯ್ಯ.