ಎಲೆ ಮನ ಬುದ್ಧಿ ಚಿತ್ತ ಅಹಂಕಾರವೆಂಬ
ಎನ್ನ ಚತುರ್ವಿಧ ಮಂತ್ರಿ ಪ್ರಧಾನರು ಕೇಳಿರಯ್ಯ
ನಾನು ಕೆಟ್ಟು ಭ್ರಷ್ಟನಾಗಿ ಹೋದ ಕರ್ಮದ ಅಂಡಲೆಯ ಬಗೆಯ.
ನಾನು ಸ್ವರ್ಗ ಮರ್ತ್ಯ ಪಾತಾಳದೊಳಗುಳ್ಳ
ಭೋಗರಾಜ್ಯಕ್ಕೆ ಅರಸಾಗಿ ಅನಂತಕಾಲ ಪಟ್ಟವನಾಳಿ
ಎನ್ನ ಚತುರಂಗಬಲಕ್ಕೆ
ಬೇಡಿದ ಪಡಿ ಕಂದಾಯಮಂ ಕೊಟ್ಟುಕೊಟ್ಟು ನಷ್ಟವಾಗಿ
ಎನಗೆ ಎರಡುನಲವತ್ತೆರಡು ಲಕ್ಷದ ಭವರಾಟಳದ ಋಣಬಿದ್ದಿತ್ತ
ಆ ಋಣಕ್ಕಂಜಿ ಭೋಗರಾಜ್ಯಮಂ ಬಿಟ್ಟು ದರಿದ್ರನಾದೆನು.
ಎನಗೆ ನೀವು ಮಾಡುವ ರಾಜಕಾರ್ಯದ ಮಣಿಹ ನಿಮಗೆ ತೆಗೆಯಿತು.
ಎನ್ನ ನಂಬಿ ಕೆಡಬೇಡ ಕೆಡಬೇಡ.
ನಿಮ್ಮ ಪೂರ್ವಾಶ್ರಯಕ್ಕೆ ನೀವು ಹೋಗಿರೆಲೆ.
ಅಜ್ಞಾನ ತಮಕ್ಕೆ ಜ್ಯೋತಿಃಪ್ರಕಾಶವನುಳ್ಳ
ಸಮ್ಯಜ್ಞಾನವೇ ನೀನು ಕೇಳಯ್ಯ.
ಆತ್ಮನು ಜ್ಞಾನಸ್ವರೂಪನೆಂದು ವೇದಾಗಮಂಗಳು ಸ್ಮೃತಿ ಸಾರುತ್ತಿವೆ.
ನಾನು ಜೀವತ್ವಮಂ ಅಳಿದು ಶರಣತ್ವಮಂ ಕೈವಿಡಿದೆ.
ಎನ್ನೊಳಗೆ ನೀನು
ನನೆಯೊಳಗಣ ಪರಿಮಳದಂತೆ ಹುದುಗಿಪ್ಪೆಯಾಗಿ
ನೀನೂ ನಾನೂ
ಗೋಳಕಾಕಾರಸ್ವರೂಪವಾದ ನಿಷ್ಕಲ ಬ್ರಹ್ಮದಲ್ಲಿ
ಉದಯವಾದ ಸಹೋದರರು.
ಎಂಟು ಬೀದಿಯ ಪಟ್ಟಣದ ಚೌದಾರಿಯ ಏಕಾಂತವೀಥಿಯ
ಸುವರ್ಣ ವರ್ಣದ ಸಿಂಹಾಸನದ ಮೇಲಿಪ್ಪ
ಮನೋನಾಥನೆನಗೆ ಕಾಣಿಸಿ
"ನಿನ್ನ ಶ್ರೀ ಚರಣಮಂ ಎಂದೆಂದೂಪೂಜೆ ಮಾಡುವ ಭೃತ್ಯ"ನೆಂದು
ಭಯಭಕ್ತಿಯಿಂದ ಬಣ್ಣಿಸಿ
ಎನ್ನ ಮಾಯಾಪಾಶಮಂ ಸುಡುವಂತೆ ಛಲವನ್ನುಂಟುಮಾಡು.
ಚಿದಾಕಾಶದಲ್ಲಿ, ಆರು ಮೂರಾಗಿ ಮೂರು ಒಂದಾಗಿ
ಎರಡುವೀಥಿಯ ಮಾಣಿಕ್ಯಪುರದ ಸಂಗಮಸ್ಥಾನವೆಂಬ
ಅರಮನೆಯಲ್ಲಿ ನೆಲೆಸಿಪ್ಪ ಮಹಾರಾಯನ ಮುಂದೆ ಎನ್ನನಿಕ್ಕಿ
"ನಿನ್ನ ಆದಿ ಅನಾದಿಯ ಹಳೆಯ" ನೆಂದು ಬಿನ್ನಪಂಗೈದು
ಕರುಣಾರಸಮಂ ಬೀರಿಸಿ
ಎನಗೆ ಮುಕ್ತಿರಾಜ್ಯಮಂ ಕೊಡುವಂತೆ ಸಂಧಾನಮಂ ಮಾಡು.
ಆ ಮುಕ್ತಿ ರಾಜ್ಯಕ್ಕೆ ಪಟ್ಟಮಂ ಕಟ್ಟಿಸಿ
ಅಭಯ ಹಸ್ತಮಂ ಕೊಡಿಸಿ
ಎನ್ನ ಎಂಬತ್ತುನಾಲ್ಕುಲಕ್ಷ ಭವರಾಟಾಳದ ಋಣವ
ತಿದ್ದುವಂತೆ ಮಾಡಯ್ಯ
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.
Art
Manuscript
Music
Courtesy:
Transliteration
Ele mana bud'dhi citta ahaṅkāravemba
enna caturvidha mantri pradhānaru kēḷirayya
nānu keṭṭu bhraṣṭanāgi hōda karmada aṇḍaleya bageya.
Nānu svarga martya pātāḷadoḷaguḷḷa
bhōgarājyakke arasāgi anantakāla paṭṭavanāḷi
enna caturaṅgabalakke
bēḍida paḍi kandāyamaṁ koṭṭu koṭṭu naṣṭavāgi
enage eraḍunalavatteraḍulakṣadabhavarāṭaḷada r̥ṇabiddita
ā r̥ṇakkan̄ji bhōgarājyamaṁ biṭṭu daridranādenu.
Enage nīvu māḍuva rājakāryada maṇiha nimage tegeyitu.
Enna nambi keḍabēḍa keḍabēḍa.
Nim'ma pūrvāśrayakke nīvu hōgirele.
Ajñānatamakke jyōtiḥprakāśavanuḷḷa
samyajñānavē nīnu kēḷayya.
Ātmanu jñānasvarūpanendu vēdāgamaṅgaḷu smr̥ti sāruttive.
Nānu jīvatvamaṁ aḷidu śaraṇatvamaṁ kaiviḍide.
Ennoḷage nīnu
naneyoḷagaṇa parimaḷadante hudugippeyāgi
nīnū nānū
gōḷakākārasvarūpavāda niṣkala brahmadalli
udayavāda sahōdararu.
Eṇṭubīdiya paṭṭaṇada caudāriya ēkāntavīthiya
suvarṇavarṇada sinhāsanada mēlippa
manōnāthanenage kāṇisi
ninna śrī caraṇamaṁ endendū
pūjemāḍuva bhr̥tyanendu
bhayabhaktiyinda baṇṇisi
enna māyāpāśamaṁ suḍuvante chalavannuṇṭu māḍu.
Cidākāśadalli, āru mūrāgi mūru ondāgi
eraḍuvīthiya māṇikyapurada saṅgamasthānavemba
aramaneyalli nelesippa mahārāyana munde ennanikki
ninna ādi anādiya haḷeya nendu binnapaṅgaidu
karuṇārasamaṁ bīrisi
enage muktirājyamaṁ koḍuvante sandhānamaṁ māḍu.
Ā mukti rājyakke paṭṭamaṁ kaṭṭisi
abhaya hastamaṁ koḍisi
enna embattunālkulakṣa bhavarāṭāḷada r̥ṇava
tidduvante māḍayya
ghanaliṅgiya mōhada cennamallikārjuna.